ಮೂಡುಬಿದಿರೆ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಪತ್ರಕರ್ತ ಮಂದಾರ ರಾಜೇಶ್ ಭಟ್ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ದಿನಪತ್ರಿಕೆಗಳು, ದ್ವಿಭಾಷಾ ವಾರಪತ್ರಿಕೆಗಳಲ್ಲಿನ ನಿರಂತರ ಬರವಣಿಗೆ, ಸ್ಥಳೀಯ ದೃಶ್ಯ ಮಾಧ್ಯಮ ನಿರೂಪಣೆ ಮತ್ತು ವರದಿಗಾರಿಕೆ, ಪುಸ್ತಕಗಳ ಪ್ರಕಟಣೆ ಹಾಗೂ ಉಚಿತ ವಿತರಣೆ ಮೂಲಕ ಮಾಧ್ಯಮ,ಸಾಹಿತ್ಯ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಅವರ ಬಹುಮುಖ ಪ್ರತಿಭೆಗಳಿಗಾಗಿ ಈ ಗೌರವ ಪ್ರಾಪ್ತವಾಗಿದೆ.
ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ, ತುಳು ಮತ್ತು ಕನ್ನಡ ಭಾಷೆಯ ಪಾರಂಪರಿಕ ಶೈಲಿಯ “ಮಂದಾರ ರಾಮಾಯಣ” ಮಹಾಕಾವ್ಯದ ಸುಗಿಪು ದುನೀಪು, ವಾಚನ ವ್ಯಾಖ್ಯಾನ ಪ್ರಸಾರ ಕಾರ್ಯಕ್ರಮಗಳನ್ನು ನಿರಂತರ ಸಂಘಟಿಸಿ ಸೈ ಎನಿಸಿಕೊಂಡಿದ್ದಾರೆ. “ಬೀರದ ಬೊಲ್ಪು” ಎಂದು ಕರೆಯುವ ತುಳು ಭಾಷೆಯಲ್ಲಿನ ಶ್ರೀಕೃಷ್ಣನ ಬಾಲ್ಯ ಲೀಲಾ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಿಗೂ ಹಿರಿಯರಿಗೂ ತುಳು ಸಂಸ್ಕೃತಿ ತಲುಪುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಯಶಸ್ವೀ ಕಾರ್ಯನಿರ್ವಹಿಸಿದ ಅನುಭವ ಇವರದ್ದು. ತುಳು ವರ್ಲ್ಡ್ ಸಂಸ್ಥೆಯ ಸಂಚಾಲಕರಾಗಿ, ತುಳು ಭಾಷೆ, ಸಂಸ್ಕೃತಿಯ ಅಭಿಮಾನ, ಅಧ್ಯಯನ ಮತ್ತು ಜಾಗೃತಿಗೆ ಕೊಡುಗೆ ನೀಡಿದ್ದಾರೆ. “ತುಳುವ ಮಹಾಸಭೆ”ಯ ಸದಸ್ಯ ಹಾಗೂ ಮಾಧ್ಯಮ ಸಲಹೆಗಾರರಾಗಿದ್ದು, ಶತಮಾನೋತ್ಸವದತ್ತ ಸಾಗುತ್ತಿರುವ ಈ ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯವನ್ನು ಗುರುತಿಸಿ ಇಂಡಿಯನ್ ಅಂಪಯರ್ ಯುನಿವರ್ಸಿಟಿ ಹಾಗೂ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸಿದ್ದರು.