ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರನೆಯ ಸಮುದಾಯ ಬಾನುಲಿ ಕೇಂದ್ರ!
ವಿಶೇಷ: ಹರೀಶ್ ಕೆ.ಆದೂರು
ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಗೆ ಮತ್ತೊಂದು ಹೆಮ್ಮೆ!. ತಾಲೂಕಿನ ಮೊದಲ ಸಮುದಾಯ ಬಾನುಲಿ ಕೇಂದ್ರ ವಿದ್ಯಾಗಿರಿಯಲ್ಲಿ ಸುಸಜ್ಜಿತವಾಗಿ ತಲೆಯೆತ್ತಿದೆ. ಶೀಘ್ರದಲ್ಲಿಯೇ ಮನೆ ಮನಗಳನ್ನು ಸೂರೆಗೊಳ್ಳಲಿದೆ. ಸಮುದಾಯ ಬಾನುಲಿ ಕೇಂದ್ರವು ಅಂದುಕೊoಡoತೆಯೇ ಆದರೆ ಮುಂದಿನ ಒಂದೆರಡು ತಿಂಗಳಲ್ಲಿ ೮೮.೪ ತರಂಗಾoತರಗಳಲ್ಲಿ ತಾಲೂಕು ವ್ಯಾಪ್ತಿಯ ಶ್ರೋತೃಗಳಿಗೆ ಕಾರ್ಯಕ್ರಮ ವೈವಿಧ್ಯಗಳನ್ನು ಉಣಬಡಿಸಲಿದೆ. ಈಗಾಗಲೇ ವಿದ್ಯಾಗಿರಿಯ ಆಳ್ವಾಸ್ ಸ್ನಾತಕೋತ್ತರ ವಿಭಾಗದಲ್ಲಿ ಪ್ರತ್ಯೇಕ ಪ್ರೊಡಕ್ಷನ್ ಸ್ಟುಡಿಯೋ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ನುರಿತ ತಂತ್ರಜ್ಞರ ತಂಡ ಈ ಕೇಂದ್ರದ ಯಶಸ್ಸಿಗಾಗಿ ಶ್ರಮಿಸುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ೫ ಶಿಕ್ಷಣಸಂಸ್ಥೆಗಳು ಸಮುದಾಯ ರೇಡಿಯೋ ಕೇಂದ್ರಗಳನ್ನು ನಡೆಸುತ್ತಿದ್ದು, ಆ ಸಾಲಿನಲ್ಲಿ `ಆಳ್ವಾಸ್ ರೇಡಿಯೋ’ ಸೇರ್ಪಡೆಗೊಳ್ಳಲಿದೆ!
ಇದೊಂದು ವಿಭಿನ್ನ ಕೇಂದ್ರ: ಈ ಸಮುದಾಯ ಬಾನುಲಿಯಲ್ಲೂ ಹೊಸತನವನ್ನು ಸೃಷ್ಠಿಸುತ್ತ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ಧ್ವನಿ ಕೇಂದ್ರಿತವಾಗಿಯಷ್ಟೇ ಕಾರ್ಯಕ್ರಮ ಪ್ರಸಾರ ಮಾಡದೆ, ವಿಡಿಯೋ ಮೂಲಕವೂ ಕ್ರಾಂತಿ ಮಾಡಲು ಸಜ್ಜಾಗಿದೆ. ರೇಡಿಯೋ ಆಳ್ವಾಸ್ ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಷನ್ ಸಿದ್ಧಗೊಳ್ಳುತ್ತಿದ್ದು, ರೇಡಿಯೋ ಮೂಲಕ ಧ್ವನಿ, ಮೊಬೈಲ್ ಅಪ್ಲಿಕೇಷನ್ ಮೂಲಕ ಸಂಪೂರ್ಣ ವಿಡಿಯೋ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಹುರುಪು ಸಂಸ್ಥೆಯದ್ದಾಗಿದೆ.
ಅಡಿಯೋ ರೆಕಾರ್ಡಿಂಗ್ ಸ್ಟುಡಿಯೋ, ವಿಡಿಯೋ ಸ್ಟುಡಿಯೋ, ಎಡಿಟಿಂಗ್, ಪ್ರೋಗ್ರಾಮಿಂಗ್ ಹೀಗೆ ಹಲವು ವ್ಯವಸ್ಥೆಗಳು ಇಲ್ಲಿವೆ. ಒಟ್ಟಿನಲ್ಲಿ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಜನತೆಗೆ ಉಣಬಡಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

೬ಗಂಟೆಗಳ ಪ್ರಸಾರ: ಸಮುದಾಯ ಬಾನುಲಿ ಕೇಂದ್ರದ ಮೂಲಕ ದಿನದ ಆರು ಗಂಟೆಗಳ ಕಾಲ ಕಾರ್ಯಕ್ರಮ ವೈವಿಧ್ಯಗಳನ್ನು ಶ್ರೋತೃಗಳಿಗೆ ಉಣಬಡಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ. ಗ್ರಾಮೀಣ ಸೊಗಡಿನೊಂದಿಗೆ, ಯುವಜನತೆ, ಕೃಷಿಸಮುದಾಯ, ಉದ್ಯಮವಲಯ, ಗೃಹಿಣಿಯರು, ಹೀಗೆ ಪ್ರತಿಯೊಂದು ವರ್ಗದ ಜನತೆಯನ್ನು ತಲುಪುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗಿದೆ. ಶಿಕ್ಷಣ,ಕಲೆ,ಕ್ರೀಡೆ, ಭಾಷೆ, ಸಂಸ್ಕೃತಿ,ಸAಸ್ಕಾರ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳ ಪರಿಚಯದೊಂದಿಗೆ ಸಾಧಕರನ್ನು ಸಮಾಜಕ್ಕೆ ಪರಿಚಯಿಸಲು, ತನ್ಮೂಲಕ ಒಂದು ಮಹತ್ವದ ದಾಖಲೀಕರಣವನ್ನು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಮುಂಜಾನೆ ೬ಗಂಟೆಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊoಡರೆ, ೯ಗಂಟೆಯ ತನಕ ಬೆಳಗ್ಗಿನ ಪ್ರಸಾರ ಮುಂದುವರಿಯಲಿದೆ. ಸಾಯಂಕಾಲ ೬ಗಂಟೆಗೆ ಮತ್ತೆ ಪ್ರಸಾರ ಆರಂಭವಾದರೆ ರಾತ್ರಿ ೯ರ ತನಕ ನಿರಂತರ ಕಾರ್ಯಕ್ರಮ ಶ್ರೋತೃಗಳನ್ನು ತಲುಪಲಿದೆ.

೨೫ಕಿಲೋಮೀಟರ್ ವ್ಯಾಪ್ತಿ: ಸಮುದಾಯ ಬಾನುಲಿ ಕೇಂದ್ರದ ಪ್ರಸಾರ ವ್ಯಾಪ್ತಿ ೨೫ಕಿಲೋಮೀಟರ್ ಆಗಿದ್ದು, ತಾಲೂಕಿನ ಮೂಲೆ ಮೂಲೆಗಳಲ್ಲಿರುವ ಎಲ್ಲಾ ವರ್ಗದ ಕೇಳುಗರನ್ನು ಈ ಕೇಂದ್ರ ತಲುಪುವ ಸಂಭ್ರಮದಲ್ಲಿದೆ. ದೂರ ಪ್ರದೇಶದಲ್ಲಿರುವವ ಆಸಕ್ತ ಶ್ರೋತೃಗಳು ಮೊಬೈಲ್ ಅಪ್ಲಿಕೇಷನ್ ಮೂಲಕ ಈ ಕಾರ್ಯಕ್ರಮಗಳನ್ನು ಕೇಳುವ ಹಾಗೂ ನೋಡುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಆಳ್ವಾಸ್ ಸಂಸ್ಥೆಯಿAದ ಈ ಹಿಂದೆ ಆಯೋಜಿಸಲ್ಪಟ್ಟ `ಆಳ್ವಾಸ್ ನುಡಿಸಿರಿ’, ಆಳ್ವಾಸ್ ಕೃಷಿಸಿರಿ, ಆಳ್ವಾಸ್ ವಿರಾಸತ್ ಮೊದಲಾದ ಕಾರ್ಯಕ್ರಮಗಳನ್ನು ಮತ್ತೊಮ್ಮೆ ಕೇಳುವ ಅವಕಾಶ ಈ ಕೇಂದ್ರದ ಮೂಲಕ ಸಾಧ್ಯವಾಗಲಿದೆ. ತಾಲೂಕಿನ ವಿದ್ಯಾರ್ಥಿ ಸಮುದಾಯಕ್ಕಾಗಿಯೇ ಬಾನುಲಿ ಪಾಠ ಪ್ರಸಾರವಾಗಲಿದೆ. ಸಂಘ ಸಂಸ್ಥೆಗಳ ಸಾಧನೆಗಳು, ವಿದ್ಯಾರ್ಥಿ ಸಾಧಕರು, ಸಂಶೋಧಕರು ಈ ಕೇಂದ್ರದ ಕಾರ್ಯಕ್ರಮಗಳ ಮೂಲಕ ಜನತೆಗೆ ಹತ್ತಿರವಾಗುವರು.