ಮೂಡುಬಿದಿರೆ: ರಾಣಿ ಅಬ್ಬಕ್ಕನ ೫೦೦ನೇ ಜನ್ಮಶತಮಾನೋತ್ಸವದ ಶುಭ ಸಂದರ್ಭದಲ್ಲಿ ಜವನೆರ್ ಬೆದ್ರ ಫೌಂಡೇಷನ್(ರಿ.) ಆಶ್ರಯದಲ್ಲಿ ೫೦೦ ಮಂದಿ ಮಹಿಳಾ ಸಾಧಕಿಯರಿಗೆ “ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರ”ವನ್ನು ನೀಡಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಒಂದು ವರ್ಷದ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಅಮರ್ ಕೋಟೆ ತಿಳಿಸಿದ್ದಾರೆ.

ತುಳುನಾಡಿನ ಹೆಮ್ಮೆಯ ಮಗಳು, ಮೂಡುಬಿದಿರೆ ಮಣ್ಣಿನ ವೀರ ಪುತ್ರಿ ಚೌಟ ರಾಣಿ ಅಬ್ಬಕ್ಕಳ ೫೦೦ನೇ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ಜವನೆರ್ ಬೆದ್ರ ಫೌಂಡೇಶನ್ ಈಗಾಗಲೇ ಚೌಟರ ಅರಮನೆಯ ಮುಂಭಾಗದಲ್ಲಿ ೬.೫ ಆಡಿ ಎತ್ತರದ ರಾಣಿ ಅಬ್ಬಕ್ಕಳ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಐತಿಹಾಸಿಕ ಗೌರವ ಸಲ್ಲಿಸಿದೆ. ಅಬ್ಬಕ್ಕಳ ಸಾಧನೆಯನ್ನು ಪ್ರತಿಯೊಬ್ಬರಿಗೆ ಪಸರಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿದ ೫೦೦ ಮಹಿಳೆಯರಿಗೆ ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ ನೀಡಲು ಸಂಸ್ಥೆಯಿ0ದ ತೀರ್ಮಾನ ಕೈಗೊಂಡಿದೆ.