ನೀರವ ರಾತ್ರಿಯಲ್ಲಿ ಚೆಂಡೆ ಸದ್ದು ಕೇಳುವುದೆಂದರೇ ಒಂದು ಸುಂದರವಾದ ಅನುಭೂತಿ. ಹೌದು, ಯಕ್ಷಗಾನ ಕಲಾ ಪ್ರಕಾರಕ್ಕೆ ಮಾರುಹೋಗದವರೇ ಇಲ್ಲ ಎಂದರೆ ತಪ್ಪಾಗಲಾರದು. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೂ ಯಕ್ಷಗಾನವನ್ನು ಪ್ರೀತಿಸುವವರು ಮಾತ್ರವಲ್ಲ ಅರಾಧಿಸುವವರೂ ಇದ್ದಾರೆ. ಸಂಗೀತ, ನಾಟ್ಯ, ಬಣ್ಣಗಾರಿಕೆ ಮಾತುಗಾರಿಕೆ, ಸುಂದರವಾದ ವೇಷಭೂಷ ಣಗಳಿಂದೊಡಗೂಡಿರುವ ಏಕೈಕ ಕಲೆ ಯಕ್ಷಗಾನ.

ಚೆಂಡೆ, ಮದ್ದಳೆ, ಚಕ್ರತಾಳದೊಂದಿಗಿನ ಭಾಗವತಿಕೆಗೆ ತಕ್ಕಂತೆ ಮಾಡುವ ನಾಟ್ಯವೂ ಭಾವಾಭಿನಯವೂ ಶುದ್ಧವಾದ ಕನ್ನಡದ ಪ್ರಬುದ್ಧವಾದ ಮಾತುಗಾರಿಕೆಯೂ ಪಾತ್ರಕ್ಕೆ ತಕ್ಕಂಥಹ ವೇಷಭೂಷಣಗಳೂ, ನವರಸಗಳು ಮೇಳೈಸಿದ ಪೌರಾಣಿಕ ಪ್ರಸಂಗಗಳ ಪ್ರಸ್ತುತಿಯು, ಪ್ರೇಕ್ಷಕರನ್ನು ಪುರಾಣಲೋಕಕ್ಕೆ ಕರೆದೊಯ್ದು ಲೈಕಿಕದ ಜಂಜಾಟಗಳಿಂದ ಒಂದಷ್ಟು ಹೊತ್ತು ಬಿಡುಗಡೆ ನೀಡುತ್ತದೆ. ಈ ಕಲೆಯ ಒಂದು ವೈಶಿಷ್ಟ್ಯವೆಂದರೆ ರಂಗಸ್ಥಳವು ಯಾವುದೇ ಇತರ ಪರಿಕರಗಳಿಲ್ಲದೇ ಸನ್ನಿವೇಶಕ್ಕೆ ತಕ್ಕಂತೆ ಅರಮನೆಯೂ – ಸೆರೆಮನೆಯೂ ಕಾಡೂ – ನಾಡೂ, ಭೂಲೋಕವೂ – ದೇವಲೋಕವೂ, ವನವಿಹಾರವೂ – ನೀರಾಟವೂ ಆಗಿ ಬದಲಾಗುತ್ತದೆ. ಈ ರೀತಿಯ ಬದಲಾವಣೆ ಯಕ್ಷಗಾನದಿಂದ ಮಾತ್ರ ಸಾಧ್ಯ.
ಯಕ್ಷಗಾನಬಯಲಾಟಕ್ಕೆ ಆಡು ಭಾಷೆಯಲ್ಲಿ’ಆಟ’ವೆಂದು ಕರೆಯುತ್ತಾರೆ, ಇದೊಂದು ದೈವೀಕಲೆ, ಬಹಳಷ್ಟು ಜನರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ’ಆಟ ಆಡಿಸುತ್ತೇವೆ’ ಎಂದು ಹರಸಿಕೊಂಡಿರುತ್ತಾರೆ, ರಾತ್ರಿಯಿಡೀ ನಡೆಯುವ ಬಯಲಾಟದ ಜೊತೆಗೆ ಇತ್ತೀಚೆಗೆ ಕಾಲಮಿತಿ ಯಕ್ಷಗಾನದ ಪ್ರದರ್ಶನ ಗಳ ಸಂಖ್ಯೆಯೂ ಬಹಳಷ್ಟು ಹೆಚ್ಚಿದೆ.

ಗದ್ದೆ, ಬಯಲುಗಳಲ್ಲಿ ನಡೆಯುವ ಬಯಲಾಟದ ಸೊಬಗೇ ವಿಶಿಷ್ಟವಾದುದು. ನನ್ನ ಬಾಲ್ಯದಲ್ಲಿ ಮನೆಮಂದಿಯೆಲ್ಲ ಜೊತೆಯಾಗಿ ರಾತ್ರಿಯಿಡೀ ನಡೆಯುವ ಯಕ್ಷಗಾನಕ್ಕೆ ಹೋಗುತ್ತಿದ್ದುದೂ ಅಲ್ಲಿ ಕಡಲೆ, ಚುರುಮುರಿ ಮೆಲ್ಲುತ್ತಾ ಯಕ್ಷಗಾನ ನೋಡುತ್ತಿದ್ದುದೂ ಇನ್ನೂ ಮನ:ಪಟಲದಲ್ಲಿ ಹಸಿರಾಗಿದೆ. ನೂರಾರು ಪೌರಾಣಿಕ ಪ್ರಸಂಗಗಳಿದ್ದರೂ ಅದೆಷ್ಟು ಬಾರಿ ನೋಡಿದರೂ ಬೇಸರವೆನಿಸದಿರುವ ಪ್ರಸಂಗವೆಂದರೆ ’ಶ್ರೀದೇವಿ ಮಹಾತ್ಮೆ’. ಈ ಪ್ರಸಂಗವನ್ನು ನಾನದೆಷ್ಟು ಸಲ ವೀಕ್ಷಿಸಿದ್ದೇನೋ ನನಗೇ ತಿಳಿದಿಲ್ಲ. ಪಶ್ಚಿಮಘಟ್ಟವನ್ನು ’ನಿತ್ಯಹರಿದ್ವರ್ಣದ ಕಾನನ’ ಎಂಬುದಾಗಿ ವರ್ಣಿಸುವಂತೆ ಶ್ರೀದೇವಿ ಮಹಾತ್ಮೆಯನ್ನು ಎವರ್ ಗ್ರೀನ್ – ನಿತ್ಯನೂತನ ಪ್ರಸಂಗ ಎನ್ನಬಹುದು.
ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ತೆಂಕು ತಿಟ್ಟು- ಬಡಗುತಿಟ್ಟು ಎಂಬ ಭೇದವಿಲ್ಲದೆ ಇದರತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಅದರಂತೆಯೇ ಮಹಿಳೆಯರೂ ಇಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಈ ಕಲೆಯ ಬಗೆಗಿನ ಒಲವಿಗೆ ಸಾಕ್ಷಿ. ಉತ್ಕೃಷ್ಟ ಗುಣಮಟ್ಟದ ಹಲವಾರು ಮೇಳಗಳು ಅದೆಷ್ಟೋ ಜನರ ಜೀವನಕ್ಕೆ ಆಧಾರವಾಗಿರುವುದು ನಮ್ಮ ನೆಲದ ಹೆಮ್ಮೆ, ಅಂತೆಯೇ ಅಲ್ಲಲ್ಲಿ ಹಲವಾರು ಯಕ್ಷಗಾನ ಕಲಿಕಾ ಕೇಂದ್ರಗಳೂ ತಲೆಯೆತ್ತುತ್ತಿವೆ, ಇದರಿಂದಾಗಿ ಆಸಕ್ತರಿಗೆ ಯಕ್ಷಗಾನ ಕಲಿಕೆ ಸುಲಭದಲ್ಲಿ ಲಭ್ಯ, ಪ್ರದರ್ಶನಗಳೂ ಅಷ್ಟೇ ಹೊರಾಂಗಣ ಮಾತ್ರವಲ್ಲ ಒಳಾಂಗಣದಲ್ಲೂ ನಡೆಯುತ್ತವೆ. ಯಕ್ಷಗಾನ ವೀಕ್ಷಣೆಯಿಂದ ಪುರಾಣದ ಜ್ಞಾನವು ಹೆಚ್ಚುತ್ತಿರುವುದು ಸರ್ವವೇದ್ಯ. ಏನೇ ಆಗಲಿ ಯಕ್ಷಗಾನಕ್ಕೆ ಯಕ್ಷಗಾನವೇ ಸಾಟಿ, ಯಕ್ಷಗಾನವನ್ನು ಉಳಿಸಿ ಬೆಳೆಸುವತ್ತ ನಮ್ಮೆಲ್ಲರ ಚಿತ್ತವಿರಲಿ.
– ಅರುಣ ಅದೂರ್