ನೋಡಿ ನೋಡಿ ಸಾಕಾಗಿ ಮಕ್ಕಳೇ ರಸ್ತೆ ಸರಿಪಡಿಸಿದ್ರು!
ಈ ದಿನ ಫೋಕಸ್ ಸ್ಟೋರಿ
ಮೂಡುಬಿದಿರೆ: ಭಾನುವಾರ ಬೆಳ್ಳಂಬೆಳಗ್ಗೆ ಹಾರೆ,ಬುಟ್ಟಿ,ಪಿಕಾಸಿಯೊಂದಿಗೆ ನಾಲ್ಕಾರು ಮಕ್ಕಳು ರಸ್ತೆಗಿಳಿದರು. ಹೊಂಡಗಳನ್ನು ಶುಚಿಗೊಳಿಸಿ, ಅದಕ್ಕೆ ಕಲ್ಲು ಮಣ್ಣು ಹಾಕಿ ಮುಚ್ಚಲಾರಂಭಿಸಿದರು. ಪುರಸಭಾ ವ್ಯಾಪ್ತಿಯ ರಸ್ತೆ ಗುಂಡಿಗಳಿಗೆ ಮಕ್ಕಳು ಮುತುವರ್ಜಿ ವಹಿಸಿ ಮಣ್ಣುಹಾಕಿ, ಗುಂಡಿಗಳನ್ನು ಮುಚ್ಚಿ ಮಾದರಿಯಾಗಿದ್ದಾರೆ. ಮಾರಿಗುಡಿ-ಹುಡ್ಕೋ ಕಾಲನಿಯ ರಸ್ತೆ ತೀರ ನಾದುರಸ್ತಿಯಾಗಿದ್ದು ಹಲವು ಬಾರಿ ಪುರಸಭೆಗೆ ಸಂಬ0ಧಪಟ್ಟವರು ಮನವಿ ನೀಡಿದ್ದರು.
ಪುರಸಭೆಯಿಂದ ಸರಿಯಾದ ಸ್ಪಂದನೆ ದೊರಕಿಲ್ಲ. ದಿನಂಪ್ರತಿ ಹಲವಾರು ವಾಹನಗಳು, ವಿದ್ಯಾರ್ಥಿಗಳು, ಈ ಭಾಗದಲ್ಲಿ ಸಂಚರಿಸುತ್ತಾರೆ. ರಸ್ತೆ ಹೊಂಡಗಳಿ0ದಾಗಿ ದ್ವಿಚಕ್ರ ವಾಹನ ಸವಾರರೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡ ಸ್ಥಳೀಯ ಶಿವಾಜಿ ಫ್ರಂಡ್ಸ್ ತಂಡದ ಸದಸ್ಯರು ರಸ್ತೆ ಹೊಂಡಗಳನ್ನು ಮುಚ್ಚಲು ಮುಂದಡಿಯಿಟ್ಟರು. ಭಾನುವಾರ ಬೆಳಗ್ಗಿನಿಂದ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದು, ಸ್ಥಳೀಯರು ಮಕ್ಕಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನಾದರೂ ಪುರಸಭೆ ಎಚ್ಚೆತ್ತುಕೊಳ್ಳಬೇಕಾಗಿದೆ. ಮಕ್ಕಳ ಈ ಕಾರ್ಯದಿಂದಾದರೂ ಕಣ್ಣು ತೆರೆಯುವಂತಾಗಬೇಕಾಗಿದೆ.