ಮೂಡುಬಿದ್ರೆ: ಆಧ್ಯಾತ್ಮಿಕ ಚಿಂತನೆಯಿಂದ ಇಂದು ದೇಶ ಅಭಿವೃದ್ಧಿ ಕಾಣುವಂತಾಗಿದೆ, ಸಂಸ್ಕಾರಯುತ ಚಿಂತನೆಯಿಂದ ದೇಶದಲ್ಲಿಂದು ಸಂಸ್ಕೃತಿಯ ವಾತಾವರಣ ಮೂಡುವಂತಾಗಿದೆ ಎಂದು ಹಿರಿಯ ಉದ್ಯಮಿಗಳೂ ಆಗಿರುವ ಕಲ್ಲಬೆಟ್ಟು ಶ್ರೀ ಮಹಮ್ಮಾಯೀ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್ ನುಡಿದರು.
ಕಲ್ಲಬೆಟ್ಟು ಶ್ರೀ ಮಹಮ್ಮಾಯೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. 14ರಂದು ನಡೆದ ಧಾರ್ಮಿಕ ಸಭೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತ ದೇಶ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಹೊಂದಿರುವ ದೇಶವಾಗಿದೆ. ತಂತ್ರಜ್ಞಾನದ ಆಧುನಿಕ ಯುಗದಲ್ಲಿ ನಾವಿದ್ದರೂ ನಮ್ಮ ಪರಂಪರೆಯಾಗಿರುವ ದೇವತಾರಾಧನೆಯನ್ನು ಇಂದಿಗೂ ಉಳಿಸಿಕೊಂಡಿರುವುದು ನಮ್ಮ ಹೆಗ್ಗುರುತಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಮಾತನಾಡುತ್ತಾ ದೇವರು ಅನುಗ್ರಹಿಸುತ್ತಾನೆಂದು ನಾವು ಪ್ರಯತ್ನ ಪಡದೆ ಸುಮ್ಮನೆ ಕುಳಿತರೆ ಯಾವುದೂ ಸಾಧ್ಯವಾಗುವುದಿಲ್ಲ. ಪ್ರಯತ್ನ ಪಟ್ಟರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಕೊಡುವಾಗ ಇರುವ ಪ್ರೀತಿ ತೆಗೆದುಕೊಳ್ಳುವಾಗ ಇರುವುದಿಲ್ಲ. ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗುವ ಮುಂದಿನ ಯೋಜನೆಗಳಿಗೆ ಭಕ್ತಾದಿಗಳು ಮನತುಂಬಿ ಸಹಕಾರ ನೀಡಬೇಕು ಎಂದರು. ದೇವಸ್ಥಾನದ ಅಭಿವೃದ್ದಿಗೆ ವಿಶೇಷ ಕೊಡುಗೆ ನೀಡುತ್ತಿರುವ ಎಕ್ಸಲೆಂಟ್ ಕಾಲೇಜಿನ ಯುವರಾಜ್ ಜೈನ್, ಕಟೀಲೇಶ್ವರಿ ಕನ್ ಸ್ಟ್ರಕ್ಷನ್ ನ ರಾಜೇಶ್ ಬಂಗೇರ, ವೇ. ಮೂ. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಉದ್ಯಮಿ ಹರೀಶ್ ಪೂಜಾರಿ, ಪ್ರವೀಣ್ ಶೆಟ್ಟಿ ಮಾರೂರು ಅವರ ಪರವಾಗಿ ಪುರುಷೋತ್ತಮ ಶೆಟ್ಟಿ, ತೆಂಕಬೆಟ್ಟುಗುತ್ತು ಕುಟುಂಬಸ್ಥರ ಪರವಾಗಿ ಕೃಷ್ಣ ಶೆಟ್ಟಿ, ಸೌರವ ಜತ್ತನ್, ಬಿಕರ್ನಕಟ್ಟೆ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.
ರಮೇಶ್ ಚಂದ್ರ ಪಿ. ಸನ್ಮಾನಿತರು ದೇವಸ್ಥಾನಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸುತ್ತಾ ಸನ್ಮಾನಪತ್ರ ವಾಚಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹರೀಶ್ ಕಾಪಿಕಾಡ್ ಅವರು ದೇವಸ್ಥಾನದ ಅಂಗಣದ ಮೇಲ್ಛಾವಣಿ ನಿರ್ಮಾಣ ಮತ್ತು ಕಲ್ಯಾಣ ಮಂಟಪ ಮತ್ತು ಅನ್ನಛತ್ರ ನಿರ್ಮಾಣ ದೇವಳದ ಮುಂದಿನ ಯೋಜನೆಗಳಾಗಿದ್ದು ಭಕ್ತಾಭಿಮಾನಿಗಳ ಸಹಕಾರ ಯಾಚಿಸುತ್ತಾ ಅತಿಥಿಗಳನ್ನು ಸ್ವಾಗತಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಾಮಚಂದ್ರ, ಅರ್ಚಕ ಸೂರ್ಯ ಆರ್. ರಾವ್, ಮಹಮ್ಮಾಯೀ ಸೇವಾ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಮ್ಮಾಯೀ ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಳಾ ರಾವ್ ಉಪಸ್ಥಿತರಿದ್ದರು.
ಕು. ಸುಮಾ ಪೈ ಪ್ರಾರ್ಥಿಸಿದರು. ಗೋಪಾಲಕೃಷ್ಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುಧೀರ್ ಪೈ ವಂದಿಸಿದರು.
ಪದ್ಮಯ್ಯ ಬಿ. ಸುವರ್ಣ, ಕಮಲಾಕ್ಷ ಬಿ. ರಾವ್, ದಿನೇಶ್ ಶೆಟ್ಟಿ ಕಲ್ಲಬೆಟ್ಟು, ರಮೇಶ್ಚಂದ್ರ ಪಿ., ಸುಧೀರ್ ಪೈ, ದಿನೇಶ್ ರಾವ್ ಮತ್ತು ಶೋಭಾ ಸುರೇಶ್ ಸಹಕರಿಸಿದರು.