ಪುಣಚ: ಕೃಷಿಕರು ಒಗ್ಗಟ್ಟಾದರೆ ಏನುಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ನೋಡಿ ಸ್ಪಷ್ಟ ಉದಾಹರಣೆ. ಉಡುಪಿ ಮಂಗಳೂರು ೪೦೦ಕೆವಿ ಪವರ್ ಲೈನ್ ಎಳೆಯಲು ಟವರ್ ಸ್ಥಾಪನೆಗೆ ಯುಕೆಟಿಎಲ್ ಸಂಸ್ಥೆಯವರು ಜೆಸಿಬಿಯೊಂದಿಗೆ ಹತ್ತು ಹದಿನೈದು ಮಂದಿ ಪುಣಚ ಗ್ರಾಮಕ್ಕೆ ಆಗಮಿಸಿದ್ದಾರೆ. ಮೊದಲೇ ಈ ಯೋಜನೆಯ ಅಸ್ಪಷ್ಟ ಮಾಹಿತಿ, ಯೋಜನೆ ಅನುಷ್ಠಾನಗೊಂಡರೆ ಆಗುವ ತೊಂದರೆಗಳ ಬಗ್ಗೆ ಒಂದಷ್ಟು ಮಾಹಿತಿ ತಿಳಿದಿದ್ದ ಜನತೆ, ಗ್ರಾಮಸ್ಥರು ಜೊತೆಗೆ ರೈತ ಸಂಘದ ಸದಸ್ಯರು ಒಗ್ಗಟ್ಟಾಗಿದ್ದಾರೆ. ಸ್ಥಳದಲ್ಲಿ ಜಮಾಯಿಸಿ, ಕಂಪೆನಿಯನ್ನು ಹಿಮ್ಮೆಟ್ಟುವಂತೆ ಮಾಡಿದ್ದಾರೆ. ಯಾವ ಕಾರಣಕ್ಕೂ ಇಲ್ಲಿಗೆ ನೀವು ಬರುವಂತೆಯೇ ಇಲ್ಲ. ಬಂದರೆ ಮುಂದಾಗುವ ತೊಂದರೆಗಳಿಗೆ ನೀವೇ ಹೊಣೆ ಎಂದು ಎಚ್ಚರಿಸಿ ಕಳುಹಿಸಿದ್ದಾರೆ. ಮಂಗಳವಾರ ಪುಣಚ ಗ್ರಾಮದಲ್ಲಿ ಟವರ್ ಸ್ಥಾಪನೆಗೆ ಮುಂದಾದಾಗ ಭಾರೀ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಗ್ರಾಮಸ್ಥರು, ರೈತ ಸಂಘದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಅರುಣ್ ಪುತ್ತಿಲ ಸೇರಿದಂತೆ ಮುಖಂಡರು ಆಗಮಿಸಿದ್ದರು. ಸುಮಾರು ೧೫೦ಜನ ಗ್ರಾಮಸ್ಥರು ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮಾಹಿತಿ ನೀಡದ ಹೊರತು ಇಲ್ಲಿ ಯಾವ ಟವರ್ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟ ಪಡಿಸಿದ್ದಾರೆ.
ಜಿಲ್ಲಾಧಿಕಾರಿ, ತಹಶೀಲ್ದಾರ್ ಬಂದು ವಿಟ್ಲ ಭಾಗದ ಸಭೆ ಇಲ್ಲಿ ಆಗಬೇಕು. ಬಂಟ್ವಾಳ ಭಾಗದ್ದು, ಬಿಸಿ ರೋಡಿನಲ್ಲಿ ಆಗಬೇಕು. ಆಗದೆ ಟವರ್ ನಿರ್ಮಾಣ ಮಾಡುವ ಹಾಗಿಲ್ಲ ಎಂದು ಸ್ಥಳಕ್ಕೆ ಭೇಟಿನೀಡಿದ ಮಾಜಿ ಶಾಸಕ ಸಂಜೀವ ಮಂಠAದೂರು ವಿದ್ಯುತ್ ಕಂಪೆನಿಗೆ ಹೇಳಿದ್ದಾರೆ.
ಸ್ಥಳದಲ್ಲಿಯೇ ಬಂದು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಪುತ್ತಿಲ ಪರಿವಾರದ ಅರುಣ್ ಪುತ್ತಿಲ ಹೇಳಿದ್ದಾರೆ. ಜೆಸಿಬಿ ಯಾವುದೇ ಬಂದರೂ ಬಿಡಲಾಗುವುದಿಲ್ಲ. ಜಿಲ್ಲಾಧಿಕಾರಿ ಬಂದು ಮಾಹಿತಿ ನೀಡಿದ ನಂತರ ಮುಂದುವರಿದರೆ ಸಾಕು. ಯಾವ ವಾಹನ ಬಂದರೂ ಬರಲು ಬಿಡುವುದಿಲ್ಲ ಎಂಬ ನಿರ್ಧಾರ ಸ್ಥಳೀಯರು ತೆಗೆದುಕೊಳ್ಳಬೇಕೆಂದರು.
ಪಂಚಾಯತ್ ನಿರ್ಣಯ ಇರುವಾಗ ಏಕಾಏಕಿ ಬರುವುದು, ಟವರ್ ನಿರ್ಮಾಣಕ್ಕೆ ಮುಂದಾಗುವುದು ಸರಿಯಲ್ಲ. ಕಾನೂನು ವ್ಯವಸ್ಥೆಯನ್ನು ಮೀರಿ ಈ ಘಟನೆ ಆಗುತ್ತದೆ. ಬಂದ ಯಾವ ವಾಹನವನ್ನು ಬಿಡಬೇಡಿ. ಸೀಸ್ ಮಾಡಿ ಕೇಸ್ ಮಾಡಬೇಕು. ಜೆಸಿಬಿ, ವಾಹನ ಹುಡಿಮಾಡುವ ಕೆಲಸ ಆಗಬಹುದು. ಜಾಗೃತರಾಗಿ ಎಂದು ಪುತ್ತಿಲ ಅವರು ಸ್ಥಳದಲ್ಲಿದ್ದ ಪೊಲೀಸರಿಗೂ ಸೂಚನೆ ನೀಡಿದ್ದಾರೆ.
ಒತ್ತಡ ಮಾಡಿ ಯೋಜನೆ ಮಾಡುವುದು ಸರಿಯಲ್ಲ. ಡಿಸಿ ಆಫೀಸಿನಲ್ಲಿ ಮೀಟಿಂಗ್ ಮಾಡುವುದು ಅಲ್ಲ. ಮೀಟಿಂಗ್ ಇಲ್ಲಿ ಆಗಬೇಕು. ಜನರ ವಿರುದ್ಧವಾಗಿಮಾಡಿದ್ರೆ ಗಲಾಟೆ ಆದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೈತ ಸಂಘದ ಮುಖಂಡ ರಾಜ ಗೌಡ ಮಾತನಾಡಿ ಜನರ ಮನೆ, ಧಾರ್ಮಿಕ ಕೇಂದ್ರದ ಮೇಲೆ ಲೈನ್ ಹೋಗುತ್ತದೆ. ಯೋಜನೆಗೆ ವಿರೋಧ ಅಲ್ಲ. ಇಲ್ಲಿ ಆಗುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲಿ. ಕಂಪೆನಿಯೊಟ್ಟಿಗೆ ಸೇರಿ ಸಮಸ್ಯೆ ಮಾಡಬೇಡಿ. ರೈತರಿಗೆ ಬೇಕಾದ ಸರಿಯಾದ ಮಾಹಿತಿ ನೀಡದೆ ಸ್ವಂತ ಲಾಭ ಮಾಡುತ್ತಿದ್ದಾರೆ ಎಂದಿದ್ದಾರೆ.