ಶತನಮನ ಶತಸನ್ಮಾನ ಅಭಿಯಾನದ ೨೮ನೆಯ ಸನ್ಮಾನ ಸಮಾರಂಭ

ಮೂಡುಬಿದಿರೆ: ಕೆ ಎನ್ ಭಟ್ ಶಿರಾಡಿ ಪಾಲ್ ಸಂಸ್ಮರಣಾ ಶತಮಾನೋತ್ಸವದಂಗವಾಗಿ ನಡೆಯುತ್ತಿರುವ `ಶತ ನಮನ – ಶತ ಸನ್ಮಾನ’ ಅಭಿಯಾನದ ೨೮ನೆಯ ಸನ್ಮಾನವನ್ನು ಸಾಹಿತಿ, ಕನ್ನಡ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಅವರಿಗೆ ನೀಡಿ ಗೌರವಿಸಲಾಯಿತು. ಬನ್ನಡ್ಕದ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಮಂಗಳವಾರ ಶಾಲು,ಫಲಪುಷ್ಪ,ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ನೀಡಿ ಪುರಸ್ಕರಿಸಲಾಯಿತು.


ಜೀವನದಲ್ಲಿ ಸಾಧನೆ ಮಾಡಬೇಕಾದರೆ ಸ್ಪಷ್ಟವಾದ ಗುರಿ, ಸಾಧಿಸುವ ಛಲ, ಆತ್ಮವಿಶ್ವಾಸಗಳಿರಬೇಕು. ಹೊಸ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತಾ, ಬದುಕಿನ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುತ್ತಾ, ಅದರ ಸಾಕಾರಕ್ಕೆ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಕೇವಲ ಒಂದು ವಿಚಾರಗಳಿಗಷ್ಟೇ ಸೀಮಿತರಾಗದೆ ಹಲವು ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ ಕನಸು ಸಾಕಾರಗೊಳಿಸಬೇಕೆಂದು ಸನ್ಮಾನ ಸ್ವೀಕರಿಸಿದ ಯೋಗೀಶ್ ಕೈರೋಡಿ ಅಭಿಪ್ರಾಯಿಸಿದರು.
ವೃತ್ತಿಯ ಜೊತೆಗೆ ಪ್ರವೃತ್ತಿಯೂ ಇದ್ದಾಗ ವ್ಯಕ್ತಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರಕಾಶನಗೊಳಿಸಲು ಬರುವ ಅವಕಾಶಗಳನ್ನು ಸದ್ಭಳಕೆ ಮಾಡುವ ಕಲೆಯನ್ನು ಕಲಿತುಕೊಳ್ಳಿ ಎಂದು ತಿಳಿಹೇಳಿದರು. ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿ ಜೀವನದಲ್ಲೊಂದು ಸಾಧನೆ ಮಾಡಿದ ಕೆ ಎನ್ ಭಟ್ ಶಿರಾಡಿ ಪಾಲ್ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದವರು ಅಭಿಪ್ರಾಯಿಸಿದರು.
ವೃತ್ತಿ ಜೀವನವೇ ಇರಲಿ, ಶೈಕ್ಷಣಿಕ, ವಿದ್ಯಾರ್ಥಿ ಜೀವನವೇ ಇರಲಿ, ಬದುಕಿನಲ್ಲಿ ಪ್ರಮಾಣಿಕತೆ ಎಂಬುದು ಅತೀ ಅವಶ್ಯ. ಪ್ರಾಮಾಣಿಕತೆಯಿದ್ದರೆ ಎಂತಹ ಕಷ್ಟಗಳನ್ನೂ ಮೆಟ್ಟಿ ಸಾಧನೆ ಮಾಡಬಹುದಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶತನಮನ ಶತ ಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರರಾದ ಶ್ರೀಪತಿ ಭಟ್ ಅಭಿಪ್ರಾಯಿಸಿದರು.
ತನ್ನ ಜೀವನದುದ್ದಕ್ಕೂ ಸಾಧನೆಗಳನ್ನೇ ಮಾಡಿ ಜೀವನ ರೂಪಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶರಾಗಿರುವ ಕೆ ಎನ್ ಭಟ್ ಶಿರಾಡಿಪಾಲ್ ಅವರ ಜೀವನ ವೃತ್ತಾಂತವೇ ಇಂದಿನ ಯುವಜನತೆಗೊಂದು ಸ್ಫೂರ್ತಿಯಾಗಿದೆ. ಸಾಧಕರ ಸಾಧನೆಗಳನ್ನು ಅರ್ಥೈಸಿ, ಆ ರೀತಿಯ ಧನಾತ್ಮಕ ಅಂಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕೆಂದು ಪತ್ರಕರ್ತ ಹರೀಶ್ ಕೆ ಆದೂರು ಅಭಿಪ್ರಾಯಿಸಿದರು.
ಕೆ ಎನ್ ಭಟ್ ಶಿರಾಡಿ ಪಾಲ್ ಜನ್ಮಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶತನಮನ ಶತ ಸನ್ಮಾನಕಾರ್ಯಕ್ರಮವನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ನೂರು ಮಂದಿ ಸಾರ್ಥಕ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಹುಡುಕಿ, ಅವರಿದ್ದಲ್ಲಿಗೆ ಹೋಗಿ ಸನ್ಮಾನಿಸಿ ಗೌರವಿಸುವುದು ನಮ್ಮ ಯೋಜನೆಯಾಗಿದೆ ಎಂದು ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಶಶಿಕಲಾ ಎನ್. ಸ್ವಾಗತಿಸಿದರು.
ಡಾ. ಅಶೋಕ ಮುರಾಳ ವಂದಿಸಿದರು. ವಿಧ್ಯಾರ್ಥಿನಿ
ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.

Share

Leave a Reply

Your email address will not be published. Required fields are marked *