ಕಾರವಾರ: ಯೆಸ್…ಕಾರವಾರದಲ್ಲಿ ಟುಪಲೇವ್ ಲ್ಯಾಂಡ್ ಆಗಿದೆ. ಭಾರತೀಯ ನೌಕಾದಳದ ನಾಲ್ಕು ಟನ್ ತೂಕದ ೫೦ಮೀಟರ್ ಉದ್ದದ ಯುದ್ಧ ವಿಮಾನ ಕಾರವಾರ ತಲುಪಿದೆ. ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿರುವ ಐಎನ್‌ಎಸ್ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಬಳಿ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಆರಂಭಗೊಳ್ಳಲಿದ್ದು ಈ ಹಿನ್ನಲೆಯಲ್ಲಿ ವಿಮಾನವನ್ನು ಇಲ್ಲಿಗೆ ತರಲಾಗಿದೆ.
ಆರು ವರ್ಷಗಳ ಸತತ ಪ್ರಯತ್ನದ ಫಲವಾಗಿ ಭಾರತೀಯ ನೌಕಾದಳದ ವಿಶ್ರಾಂತ ಯುದ್ಧ ವಿಮಾನ ಟುಪಲೇವ್ ಕಾರವಾರ ತಲುಪುವಂತಾಗಿದೆ. ರಷ್ಯಾದಲ್ಲಿ ನಿರ್ಮಾಣದ ಟುಪೆಲೇವ್-೧೪೨ ಯುದ್ಧ ವಿಮಾನ ೧೯೮೮ ರಲ್ಲಿ ಭಾರತೀಯ ನೌಕಾದಳವನ್ನು ಸೇರ್ಪಡೆಗೊಂಡಿತು. ೨೦೧೭ರಲ್ಲಿ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ರಾಜೋಲಿಯ ನೌಕಾನೆಲೆಯಲ್ಲಿ ಇರಿಸಲಾಗಿತ್ತು. ಇದೇ ಮಾದರಿಯ ಯುದ್ಧ ವಿಮಾನವನ್ನು ವಿಶಾಕಪಟ್ಟಣಂ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಟುಪೆಲೇವ್- ೧೪೨ ಯುದ್ಧ ವಿಮಾನ ಸೇನೆಯಿಂದ ನಿವೃತ್ತಿಯಾದ ಬಳಿಕ ಸಂಗ್ರಹಾಲಯ ಸ್ಥಾಪನೆಗೆ ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು.