ಮೂಡುಬಿದಿರೆ: ನಗರ ವ್ಯಾಪ್ತಿಯಲ್ಲಿ ದಿನೇ ದಿನೇ ಗಾಂಜಾ ಮಾರಾಟ ಪ್ರಕರಣ ಹೆಚ್ಚುತ್ತಿದೆ. ಶಿಕ್ಷಣ ಕಾಶಿಯಾಗಿ ಖ್ಯಾತಿ ಪಡೆದ ಮೂಡುಬಿದಿರೆಯ ಹಲವು ಭಾಗಗಳಲ್ಲಿ ಗಾಂಜಾ ಮಾರಾಟ ಅತಿಯಾಗಿದ್ದು, ಪೊಲೀಸ್ ಇಲಾಖೆ ಇದರ ನಿಗ್ರಹಕ್ಕೆ ಮುಂದಾಗಿದೆ. ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ ಜಿ ನೇತೃತ್ವದ ತಂಡವು ಬುಧವಾರ ಬೆಳುವಾಯಿಯಲ್ಲಿ ಬಂಧಿಸಿದೆ. ಸ್ಥಳೀಯರಾದ ಮಹಮ್ಮದ್ ಅಯಾನ್ ( ೨೨ ), ಫರ್ಹಾನ್ ಖಾನ್ (೧೮) ಹಾಗೂ ಶೇಖ್ ಮುಹಮ್ಮದ್ ಜುಬೈರ್ (೧೯) ಬಂಧಿತ ಆರೋಪಿಗಳಾಗಿದ್ದಾರೆ.

ಆಯಾನ್ ಬೆಂಗಳೂರು ಕಾಲೇಜೊಂದರಲ್ಲಿ ಎಲ್ ಎಲ್ ಬಿ ಓದುತ್ತಿದ್ದು ಊರಿಗೆ ಬಂದವ ಬುಧವಾರ ಬೆಳಿಗ್ಗೆ ಕಾಂತಾವರ ಧ್ವಾರದ ಬಳಿ ಸ್ಕೂಟರಿನಲ್ಲಿ ಗಾಂಜಾವನ್ನು ತಂದು ಮಂಗಳೂರು ಕಾಲೇಜೊಂದರಲ್ಲಿ ಓದುತ್ತಿರುವ ಇಬ್ಬರು ಸ್ನೇಹಿತರಾದ ಫರ್ಹಾನ್ ಮತ್ತು ಜುಬೈರ್ ಎಂಬವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಖಚಿತ ಮಾಹಿತಿ ಆಧಾರದಲ್ಲಿ ಮೂಡುಬಿದಿರೆ ಸಿಪಿಐ ಸಂದೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಬಂಧಿಸಿದೆ. ಗಾಂಜಾ ಮಾರಾಟ ಪ್ರಕರಣದಲ್ಲಿ ವಿದ್ಯಾರ್ಥಿಗಳು ಶಾಮೀಲಾಗುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಮೂಡುಬಿದಿರೆ ತಾಲೂಕಿನಾದ್ಯಂತ ಗಾಂಜಾ ಸೇರಿದಂತೆ ಅಮಲು ಪದಾರ್ಥಗಳ ಅಕ್ರಮ ದಂಧೆ ನಿರಂತರವಾಗಿದ್ದು, ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿದ್ದಾರೆ. ಪೊಲೀಸರು ಇದೀಗ ಪ್ರಕರಣ ನಿಯಂತ್ರಣಕ್ಕೆ ಮುಂದಾಗಿದ್ದಾರೆ