ಮೂಡುಬಿದಿರೆ : ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ವಿಶ್ವಕರ್ಮ. ವಿಜ್ಞಾನ ತಂತ್ರಜ್ಞಾನದಲ್ಲಿ ನಾವೆಷ್ಟೇ ಮುಂದುವರಿದಿದ್ದರೂ ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಕುತೂಹಲವಿದೆ. ಈ ಬಗ್ಗೆ ಶೋಧನೆ ಮಾಡಿದಷ್ಟು ಆಧ್ಯಾತ್ಮದತ್ತ ಸೆಳೆಯುತ್ತದೆ.ಎಲ್ಲಾ ದೇವರಿಗೆ ಮೂರ್ತರೂಪವನ್ನು ನೀಡಿದ್ದು ವಿಶ್ವಕರ್ಮ, ವಿಶ್ವಕರ್ಮರೇ ಸನಾತನ ಸಂಸ್ಕೃತಿಯ ಮೂಲವಾಗಿದ್ದಾರೆ. ಶಿಲ್ಪವೃತ್ತಿಯೆಂಬುದು ಕೇವಲ ವೃತ್ತಿಯಲ್ಲ. ನಿಸ್ತೇಜವಸ್ತುಗಳಿಗೆ ಜೀವ ತುಂಬುವ ಆ ವೃತ್ತಿಯೊಂದಿಗೆ ಆಧ್ಯಾತ್ಮ, ಕೌಶಲ್ಯ, ತ್ಯಾಗ, ತಪಸ್ಸಿನ ಗುಣ ಮಿಳಿತಗೊಂಡಿದೆ ಎಂದು ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜಯಂತಿಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.
ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅಧ್ಯಕ್ಷತೆ ವಹಿಸಿ, ದಾರ್ಶನಿಕರು, ಮಹಾಪುರುಷರ ಚಿಂತನೆಗಳನ್ನು ಅನುಸರಿಸುವುದು ಮುಖ್ಯ. ಸರಕಾರವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳು ಜಾತಿ ಮತ ಧರ್ಮವನ್ನು ಮೀರಿದ ಆಚರಣೆಗಳಾಗಬೇಕಾದುದು ಔಚಿತ್ಯ ಪೂರ್ಣ ಎಂದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಶಿವರಾಮ ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡೆಪ್ಯೂಟಿ ತಹಸೀಲ್ದಾರ್ ರಾಮ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.