ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ಪ್ರೊವಿನಿಯೋ-೨೩ ರಾಷ್ಟ್ರೀಯ ವಿಚಾರ ಸಂಕಿರಣ ಆ.೧೮ ಮತ್ತು ೧೯ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕನ್ನಡ ಭವನದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಶನ್ ಪಿಂಟೊ ಹೋಮಿಯೋಪಥಿ ಬಗೆಗಿನ ಜ್ಞಾನರ್ಜನೆಯು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದ್ದು, ಈ ಸಮ್ಮೇಳನದಲ್ಲಿ ದೇಶದ ಅನೇಕ ರಾಜ್ಯಗಳಿಂದ (ಪ್ರಮುಖವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ) ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಯೆನೆಪೋಯಾ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಮೊಹಮ್ಮದ್ ಪರ್ಹಾದ್, ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಕೆ, ಭಾಗವಹಿಸಲಿದ್ದಾರೆ.
ಎರಡು ದಿನ ನಡೆಯಲಿರುವ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ವಿಜಯ ಕೃಷ್ಣ ವಿ, `ತೀವ್ರಸ್ಥರ ಖಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳ ಸವಾಲುಗಳು ಮತ್ತು ಪರಿಹಾರಗಳು’, ಮುಂಬೈಯ ವಿರರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರವಿ ಡಾಕ್ಟರ್ ವಗೆಲಾ, ಹೋಮಿಯೋಪಥಿಕ್ ಆನ್ಕಾಲಜಿ ಹಾಗೂ ಪಶುವೈದ್ಯರಾದ ಡಾ.ಪಿ ಮನೋಹರ್ ಉಪಾಧ್ಯರವರು ಸಾಕು ಪ್ರಾಣಿಗಳಿಗೆ ಹೋಮಿಯೋಪಥಿ ಚಿಕಿತ್ಸೆಯ ಉಪಯೋಗದ ಕುರಿತು ಮಾತನಾಡಲಿದ್ದಾರೆ.
ಸಮ್ಮೇಳನದಲ್ಲಿ ಒಟ್ಟು ೩೦ ವೈದ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಗಳು ತಮ್ಮ ಸಂಶೋಧನೆಗಳನ್ನು ಮಂಡಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪ್ರಶಾಂತ್ ಡೋಂಕರ್, ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಡಾ. ಮೋನಿಕಾ ಲೋಬೋ ಉಪಸ್ಥಿತರಿದ್ದರು.