ಮೂಡುಬಿದಿರೆ: ಇನ್ನು ಆರು ತಿಂಗಳಲ್ಲಿ ಕ್ಷೇತ್ರದವ್ಯಾಪ್ತಿಯ ಪ್ರತಿಯೊಬ್ಬರಿಗೂ ಕುಡಿಯುವನೀರು, ಸೇರಿದಂತೆ ಮೂಡುಬಿದಿರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವ್ಯವಸ್ಥೆ ಮಾಡುವುದಾಗಿ ಶಾಸಕ ಉಮಾನಾಥ ಎ ಕೋಟ್ಯಾನ್ ಹೇಳಿದರು. ಆಡಳಿತ ಸೌಧದ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಆಯ್ದ ಗ್ರಾಮಗಳಿಗೆ ಯುಜಿಡಿ ವ್ಯವಸ್ಥೆ ಇನ್ನೊಂದು ವರುಷಗಳೊಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ತಂದು ಸುಸಜ್ಜಿತ ಆಡಳಿತ ಸೌಧ ನಿರ್ಮಾಣ ಮಾಡಲಾಗಿದೆ. ಮೂಡುಬಿದಿರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು ಶೀಘ್ರ ಅನುಷ್ಠಾನಗೊಳ್ಳಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಕರೆನೀಡಿದರು. ತಹಶೀಲ್ದಾರ್ ಪುಟ್ಟರಾಜು ಧ್ವಜಾರೋಹಣ ಗೈದು, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಸ್ವಾತಂತ್ರö್ಯಕ್ಕಾಗಿ ಬಲಿದಾನ ಮಾಡಿದವರನ್ನು ಸದಾ ಸ್ಮರಿಸುವಂತೆ ಕರೆನೀಡಿದರು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು. ಆಕರ್ಷಕ ಪಥ ಸಂಚಲನದಲ್ಲಿ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎನ್ ಎಸ್ ಎಸ್, ಎನ್ ಸಿ ಸಿ, ಸ್ಕೌಟ್ ಗೈಡ್ಸ್ , ಬ್ಯಾಂಡ್ ತಂಡಗಳು ಪಾಲ್ಗೊಂಡಿದ್ದರು.
ವೃತ್ತ ನಿರೀಕ್ಷಕ ನಿರಂಜನ ಕುಮಾರ್ , ಪುರಸಭಾ ಮುಖ್ಯಾಧಿಕಾರಿ ಶಿವನಾಯ್ಕ್, ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ವೇದಿಕೆಯಲ್ಲಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಸ್ವಾಗತಿಸಿದರು. ಶಿವನಾಯ್ಕ್ ವಂದಿಸಿದರು.