ರಾಜಸಭಾಂಗಣದ ಉದ್ಘಾಟನೆ: ಪ್ರತಿಭಾ ಪುರಸ್ಕಾರ
ಮೂಡುಬಿದಿರೆ: ಸನಾತನ ಸಂಸ್ಕೃತಿ, ಉತ್ಕೃಷ್ಟ ಪರಂಪರೆ ಭಾರತದ ಹೆಮ್ಮೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯ ಯುವಜನತೆ ಮಾಡಬೇಕಾಗಿದೆ. ಇಡೀ ವಿಶ್ವಕ್ಕೆ ನಮ್ಮ ದೇಶ ಕೊಟ್ಟಿರುವ ಬಹುದೊಡ್ಡ ಕೊಡುಗೆಯೆಂದರೇ ಇದುವೇ ಆಗಿದೆ ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದರು. ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ʻರಾಜ ಸಭಾಂಗಣʼ ಉದ್ಘಾಟಿಸಿ, ಪ್ರತಿಭಾ ಪುರಸ್ಕಾರಗೈದು ಮಾತನಾಡಿದರು. ಭಾರತೀಯ ಸಂಸ್ಕಾರ, ಪ್ರಕೃತಿ ಉಳಿಸುವ ಮಹತ್ಕಾರ್ಯವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇದು ಶ್ಲಾಘನಾರ್ಹ ಎಂದು ಅಭಿಪ್ರಾಯಿಸಿದರು. ನೂರನೇ ಸ್ವಾತಂತ್ರ್ಯೋತ್ಸವದ ಆಚರಣೆಯ ವೇಳೆ ಭಾರತದ ದೇಶ ಇಡೀ ವಿಶ್ವಕ್ಕೆ ಕೇಂದ್ರ ಆಗುವಂತಹ ರೀತಿಯಲ್ಲಿ ಪ್ರಗತಿಹೊಂದುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ನಮ್ಮ ಕೊಡುಗೆ ಬಹುಮುಖ್ಯವಾಗಿದೆ ಎಂದು ಅಭಿಪ್ರಾಯಿಸಿದರು. ಯುವ ಶಕ್ತಿ ಎಂಬುದು ನಮ್ಮ ದೇಶದ ದೊಡ್ಡ ವಿಚಾರವಾಗಿದೆ. ಯುವ ಶಕ್ತಿಯ ಸದ್ಭಳಕೆ ಮಾಡಿ ದೇಶ ಅತಿದೊಡ್ಡ ಸಾಧನೆಯನ್ನು ಮಾಡಲಿದೆ ಎಂದು ವ್ಯಾಖ್ಯಾನಿಸಿದರು. ಕರಾಳಿಯ ಗಂಡು ಕಲೆ ಯಕ್ಷಗಾನಕ್ಕೂ ಮೈಸೂರು ಅರಮನೆಗೂ ಹತ್ತಿರದ ನಂಟಿದೆ. ಮುಮ್ಮಡಿ ಒಡೆಯರ್ ಯಕ್ಷಗಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದ ಮೇಳವನ್ನು ಮೈಸೂರಿಗೆ ಕರೆಸಿ ಯಕ್ಷಗಾನ ಆಡಿಸುತ್ತಿದ್ದರು ಎಂಬುದನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವಹಿಸಿ, ಇದೊಂದು ಅವಿಸ್ಮರಣೀಯ ಕಾರ್ಯಕ್ರಮ. ಮಹಾರಾಜರಿಂದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಅವಕಾಶ ಲಭಿಸಿದ್ದು ನಿಜಕ್ಕೂ ಪುಣ್ಯವೇ ಸರಿ ಎಂದರು. ಇದು ಕೇವಲ ಶಿಕ್ಷಣ ನೀಡುವ ಸಂಸ್ಥೆಯಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ದಿಯ ಚಿಂತನೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.
ನೀಟ್,ಜೆ ಇ ಇ, ರಾಂಕ್ ಪಡೆದ ೨೩ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದ ಜೊತೆಗೆ ಗೌರವಿಸಲಾಯಿತು. ಎಕ್ಸಲೆಂಟ್ ಸಂಸ್ಥೆಯನ್ನು ಶೂನ್ಯ ತ್ಯಾಜ್ಯ ಆವರಣ ಎಂದುಮೂಡುಬಿದ್ರೆ ಪುರಸಭೆ ಗೌರವ ಘೋಷಣೆ ಮಾಡಿತು. ಅರಸು ಮನೆತನಕ್ಕೆ ನೀಡುವ ಗೌರವದಂತೆ ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ್ಯ, ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆಶಾಲು ನೀಡಿ ಸನ್ಮಾನಿಸಲಾಯಿತು. ಅರಸರ ಸಾಧನೆಯನ್ನು ಗೌರವಿಸಿ ಹಾಡಿನ ಮೂಲಕ ಅಭಿವಂದನೆಯನ್ನು ಯಕ್ಷನೃತ್ಯದ ಮೂಲಕ ಸಮರ್ಪಿಸಲಾಯಿತು.
ಎರಡನೆಯ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.
ಸ೦ಸ್ಥೆಯ ವಿದ್ಯಾರ್ಥಿನಿಯರು ಮೈಸೂರು ಸ೦ಸ್ಥಾನದ ಗೀತೆಯನ್ನು ಹಾಡಿದರು. ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕರಾದ ಡಾ| ಬಿ.ಪಿ ಸಂಪತ್ ಕುಮಾರ್ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮೀ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಮಾಜಿ ಶಾಸಕರದ ಅಭಯಚಂದ್ರ ಜೈನ್ ಹಾಗೂ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.