ಇಂದು ಡಾ.ರಾಜ್‌ ಹುಟ್ಟುಹಬ್ಬ: ವರನಟನ ನೆನಪಲ್ಲಿ ಅಭಿಮಾನಿಗಳು

ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ.ರಾಜ್‌ಕುಮಾರ್‌ ದೈಹಿಕವಾಗಿ ನಮ್ಮೊಂದಿಗಿರುತ್ತಿದ್ದರೆ ಇಂದು (ಏಪ್ರಿಲ್‌ 24) ಅವರು 95ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಭದ್ರವಾಗಿ ವಿರಾಜಮಾನವಾಗಿರುವ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಈ ಬಾರಿಯೂ 95ನೇ ಹುಟ್ಟುಹಬ್ಬವನ್ನು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅವರ ಕುಟುಂಬ ವರ್ಗ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದೆ. ಜೊತೆಗೆ ಸಾಕಷ್ಟು ಸಂಖ್ಯೆಯ ಅಭಿಮಾನಿ ಗಳು ಕೂಡಾ ಅಣ್ಣಾವ್ರ ಹುಟ್ಟುಹಬ್ಬ ಆಚರಿಸಲಿದ್ದಾರೆ. ಜೊತೆಗೆ ನೇತ್ರದಾನ, ರಕ್ತದಾನದಂತಹ ಸಾಮಾಜಿಕ ಕಾರ್ಯಗಳು ಕೂಡಾ ನಡೆಯಲಿದೆ.

ಅಭಿಮಾನಿಗಳ ಈ ಪ್ರೀತಿಗೆ ಕಾರಣ ಅಣ್ಣಾವ್ರ ವ್ಯಕ್ತಿತ್ವ. ಅಣ್ಣಾವ್ರು ಸೂಪರ್‌ಸ್ಟಾರ್‌ ಅಷ್ಟೇ ಆಗಿರಲಿಲ್ಲ. ಆಳಾಗಬಲ್ಲವನೇ ಅರಸಾಗುವ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈ ಕಾಲದ ಸಂಪರ್ಕಸಾಧನಗಳು ಯಾವುವೂ ಇಲ್ಲದ ಕಾಲದಲ್ಲಿ ಅವರು ನಾಡಿನಾದ್ಯಂತ ಜನಪ್ರಿಯರಾಗಿದ್ದರು. ಒಬ್ಬ ನಟ ಎಲ್ಲರಿಗೂ ಹತ್ತಿರವಾಗುವುದು ಸ್ಟಾರ್‌ಗಿರಿಯಿಂದಲೋ ಪ್ರಚಾರದಿಂದಲೋ ಅಲ್ಲ. ಅಣ್ಣಾವ್ರಿಗೆ ಇದ್ದ ಜನಪ್ರೀತಿ ಮತ್ತು ಸಜ್ಜನಿಕೆಯಿಂದ.

ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಬೇರೆ ಬೇರೆ ಕ್ಷೇತ್ರದ ಸಾಕಷ್ಟು ಮಹನೀಯರು ಕೊಡುಗೆ ನೀಡಿದ್ದಾರೆ. ಅದರ ಪರಿಣಾಮವಾಗಿಯೇ ನಮ್ಮ ಕನ್ನಡ ಭಾಷೆ ಮತ್ತು ಕರ್ನಾಟಕ ಸಾಂಸ್ಕೃತಿಕ ವೈಭವ ತನ್ನ ವೈಶಿಷ್ಟéಗಳೊಂದಿಗೆ ಜಗತ್ತಿನಾದ್ಯಂತ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಕನ್ನಡ ಚಿತ್ರರಂಗದ ವಿಷಯಕ್ಕೆ ಬರುವುದಾದರೆ, ಕನ್ನಡ ನಾಡು, ನುಡಿ, ನೆಲ-ಜಲ, ಹೋರಾಟ ಎಂದಾಗ ಮೊದಲು ನೆನಪಾಗುವ ಹೆಸರು ವರನಟ ಡಾ.ರಾಜ್‌ಕುಮಾರ್‌.

ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಹಾಕಿಕೊಟ್ಟ ಭದ್ರಬುನಾದಿ ಆಳವಾಗಿ ಬೇರೂರಿದೆ. ಕೇವಲ ಒಬ್ಬ ನಟರಾಗಿ ಉಳಿಯದೇ ಕನ್ನಡ ಭಾಷೆ ಮತ್ತು ಕರ್ನಾಟಕವನ್ನು ಕಟ್ಟುವಲ್ಲಿ, ಸಧೃಡವನ್ನಾಗಿಸುವಲ್ಲಿ, ಜನರ ಮನದಲ್ಲಿ ಕನ್ನಡ ಮೇಲಿನ ಪ್ರೀತಿ ಹೆಚ್ಚಿಸುವಲ್ಲಿ ರಾಜ್‌ಕುಮಾರ್‌ ಅವರ ಪಾತ್ರ ಅಪಾರವಾದದ್ದು. ಅದು ಅವರ ವ್ಯಕ್ತಿತ್ವದಿಂದ ಹಿಡಿದು ಮಾಡಿದ ಪ್ರತಿ ಸಿನಿಮಾಗಳ, ಹಾಡಿದ ಕನ್ನಡ ಹಾಡುಗಳ ಹಾಗೂ ಕನ್ನಡಪರ ಹೋರಾಟಗಳ ಮೂಲಕ ಕನ್ನಡತನವನ್ನು ಬಿತ್ತುತ್ತಲೇ ಬಂದವರು ರಾಜಕುಮಾರ್‌. ಕನ್ನಡ ಚಿತ್ರರಂಗವನ್ನು ಕಟ್ಟುವಲ್ಲಿ ಅವರ ಪಾತ್ರ ಪ್ರಮುಖವಾದದ್ದು ಅಂದರೆ ತಪ್ಪಿಲ್ಲ. ಅಂದು ಡಾ.ರಾಜಕುಮಾರ್‌ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಇಂದು ಕನ್ನಡ ಚಿತ್ರರಂಗ ಸಾಗುತ್ತಿದೆ ಮತ್ತು ಪ್ರಕಾಶಿಸುತ್ತಿದೆ. ಚಿತ್ರರಂಗದ ಶೈಲಿ, ತಂತ್ರಜ್ಞಾನ ಬದಲಾಗಿರಬಹುದು, ಹೊಸ ಕಥೆಗಳು ಬರುತ್ತಿರಬಹುದು. ಆದರೆ ಡಾ.ರಾಜ್‌ಕುಮಾರ್‌ ವ್ಯಕ್ತಿತ್ವ ಮಾತ್ರ ಇಂದಿಗೂ ಮಾದರಿ. ಅವರ ಛಾಪು ಎಂದಿಗೂ ಹಸಿರು.

ಡಾ.ರಾಜ್‌ಕುಮಾರ್‌ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಲಿಲ್ಲ ಎಂಬುದು ಮತ್ತೂಂದು ವಿಶೇಷ. ಕನ್ನಡಿಗರಾಗಿ, ಕನ್ನಡ ಪ್ರೇಮವನ್ನು ಎಲ್ಲೆಡೆ ಬಿತ್ತಿದ ರಾಜಕುಮಾರ್‌, ಕನ್ನಡ ಚಿತ್ರಗಳಲ್ಲಿ ನಟಿಸುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ನಟರಾಗಿ ಹೊರಹೊಮ್ಮಲು ಕನ್ನಡಿಗರು ಕಾರಣ ಎಂಬುದನ್ನು ಎಲ್ಲಾ ವೇದಿಕೆಗಳಲ್ಲೂ ಹೇಳುತ್ತಿದ್ದ ರಾಜಕುಮಾರ್‌, ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ, ಅಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೋರಾಟಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹಾಗೆ ದೊಡ್ಡ ಮಟ್ಟದ ಚಳವಳಿಗೆ ಕಾರಣವಾಗಿದ್ದು ಗೋಕಾಕ್‌ ಚಳವಳಿ.

Share

Leave a Reply

Your email address will not be published. Required fields are marked *