ಉಳ್ಳಾಲ: ಉಳ್ಳಾಲ ದರ್ಗಾ ಸಂದರ್ಶನ ನಡೆಸಿ ಉಳ್ಳಾಲ ಸಮುದ್ರ ತೀರಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಮಳಲಿ ನಿವಾಸಿ ಖಾಲಿದ್(51) ಸಮುದ್ರ ಪಾಲಾದರೆ, ಅವರ ಪುತ್ರನನ್ನು ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಖಾಲಿದ್ ಅವರು ಪತ್ನಿ, ಮಗ, ಸಂಬಂಧಿ ಮಕ್ಕಳ ಜತೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ದರ್ಗಾ ಭೇಟಿ ಬಳಿಕ ಉಳ್ಳಾಲ ಬೀಚ್‌ಗೆ ತೆರಳಿದ್ದರು.ಈ ವೇಳೆ ಖಾಲಿದ್ ಮಗ ಮತ್ತು ಕುಟುಂಬದ ಸದಸ್ಯರು ನೀರಾಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಖಾಲಿದ್ ಮತ್ತು ಅವರ ಪುತ್ರ ಸಮುದ್ರ ಪಾಲಾಗಿದ್ದಾರೆ. ಸ್ಥಳದಲ್ಲಿದ್ದ ಈಜುಗಾರರು ಖಾಲಿದ್ ಅವರ ಮಗನನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆ ವೇಳೆಗೆ ಮೃತದೇಹ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಜೀವರಕ್ಷಕರ ಪರ್ಸ್ ಕಳವು
ಖಾಲಿದ್ ಮುಳುಗುತ್ತಿದ್ದಂತೆ ಕುಟುಂಬಸ್ಥರು ರಕ್ಷಣೆಗಾಗಿ ಬೊಬ್ಬಿರಿದಿದ್ದು, ಈ ವೇಳೆ ಸಮೀಪದಲ್ಲೇ ಇದ್ದ ಕೋಡಿ ನಿವಾಸಿಗಳಾದ ಜಬ್ಟಾರ್, ಅಶ್ರಫ್, ಇಮ್ತಿಯಾಝ, ಮಹಮ್ಮದ್ ಅವರು ಧಾವಿಸಿ ಖಾಲಿದ್ ಅವರ ಪುತ್ರನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಖಾಲಿದ್ ಅವರನ್ನು ಸಮುದ್ರ ದೂರಕ್ಕೆ ಎಳೆದಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಅನಂತರ ಮೃತದೇಹ ಪತ್ತೆ ಹಚ್ಚಿದ್ದಾರೆ. ಸಮುದ್ರಕ್ಕೆ ಹಾರುವ ಸಂದರ್ಭ ಜಬ್ಟಾರ್ ಅವರು ಪರಿಚಿತರ ಕೈಯಲ್ಲಿ 8,000 ರೂ. ನಗದು ಇದ್ದ ಪರ್ಸ್, ವಾಚ್ ನೀಡಿದ್ದರು. ಆದರೆ ಆ ಪರ್ಸ್ ಕಾಣೆಯಾಗಿದೆ. ಸಿಕ್ಕಿದವರು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.