ಮೂಡುಬಿದಿರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ವೈಭವ ಶನಿವಾರ ವಿದ್ಯಾಗಿರಿಯಲ್ಲಿ ಅನಾವರಣಗೊಂಡಿತು. ೨೩ಸಹಸ್ರ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಬೃಹತ್ ಸಾಂಸ್ಕೃತಿಕ ಸಂಪ್ರದಾಯ ದಿನಾಚರಣೆ ಮಾಡಿರುವುದು ಶ್ಲಾಘನೀಯ ಎಂದು ಶಿವರಾಜ್ ಕುಮಾರ್ ಪ್ರಶಂಸಿದರು.
ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- ೨೦೨೬’ ನ್ನು ವೈಭವದಿಂದ ಆಚರಿಸಿತು. ಶಿವರಾಜ್ ಕುಮಾರ್ ದಂಪತಿ ಕಾರ್ಯಕ್ರಮವನ್ನು ಸಾಂಪ್ರದಾಯಿಕ ದೀಪ ಬೆಳಗಿ ಉದ್ಘಾಟಿಸಿ, ಡೋಲು ಬಡಿದು ಚಾಲನೆ ನೀಡಿದರು.

ಸಾಧನೆಗೆ ಬೇಕಾಗಿರುವುದು ಉದಾರತನ, ಧಾರಾಳತನ. ಇದನ್ನು ಆಳ್ವಾಸ್ ಸಂಸ್ಥೆ ನಿಜಕ್ಕೂ ಮಾಡುತ್ತಿದೆ. ಎಲ್ಲರನ್ನೂ ಒಳಗೊಳ್ಳುವುದೇ ಕನ್ನಡ ಕರ್ನಾಟಕದ ಸಂಸ್ಕೃತಿಯಾಗಿದೆ. ವಿದ್ಯಾಗಿರಿಯ ನೆಲದಲ್ಲಿ ಸಮಗ್ರ ಭಾರತೀಯ ಸಂಸ್ಕೃತಿಯನ್ನು ಒಂದುಗೂಡಿಸುವ ಕಾರ್ಯ ಆಗಿದೆ, ಮುಂದೆಯೂ ಇದು ಬೆಳೆಯಲಿ ಎಂದು ಹಾರೈಸಿದರು.
ಇದು ಎರಡನೇ ಭೇಟಿ: ಈ ಹಿಂದೆ ಸ್ಮೈಲ್ ಸಿನಿಮಾಕ್ಕಾಗಿ ಬಂದಿದ್ದೆವು. ಇದೀಗ ಮತ್ತೆ ಬಂದಿದ್ದೇನೆ. ಸುಧೀರ್ಘ ವರ್ಷದ ಬಳಿಕವೂ ನನ್ನ ಮೇಲೆ ಅದೇ ಪ್ರೀತಿ ತೋರುತ್ತಿದ್ದೀರಲ್ಲಾ. ನಾನೇ ಪುಣ್ಯವಂತ’ ಎಂದು ಕೃತಜ್ಞರಾದರು.
ಇಂತಹ ಅದ್ಭುತ ಕಾರ್ಯಕ್ರಮಕ್ಕೆ ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ಎಲ್ಲ ಸಂಸ್ಕೃತಿ ಒಂದೆಡೆ ನೋಡುವುದೇ ನಮ್ಮ ಪುಣ್ಯ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದರು.
ಕುಣಿದು ಕುಪ್ಪಳಿಸಿದ ಶಿವರಾಜ್ ಕುಮಾರ್!: ನೆರೆದ ಜನಸ್ಥೋಮವನ್ನು ಕಂಡು ರೋಮಾಂಚನಗೊAಡ ಶಿವರಾಜ್ ಕುಮಾರ್ ಹಾಡು ಹಾಡಿದರು. ಕುಣಿದು ಕುಪ್ಪಳಿಸಿದರು. ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್” ಸಿನಿಮಾದ ‘ಟುವ್ವಿ ಟುವ್ವಿ ‘ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತ್ತೈತೆ…. ನೀನೆ ರಾಜಕುಮಾರ… ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಶಿಳ್ಳೆ, ಚಪ್ಪಾಳೆಗಳನ್ನು ನೀಡಿ ಪ್ರೋತ್ಸಾಹಿಸಿದರು.
ಟಟುವ್ವಿ ಟುವ್ವಿ ಟುವ್ವಿ,… , ಮುತ್ತಣ್ಣ ಪೀಪಿ ಊದುವ…,ಮಣಿ ಮಣಿ…, ಇವನಾರ ಮಗನೋ…, ಬೇಡುವನು ವರವನ್ನು ಜೋಗಿ…, ಯಾರೇ ಕೂಗಾಡಲಿ…, ಬೊಂಬೆ ಹೇಳುತ್ತೈತೆ… ಹಾಡುಗಳನ್ನು ಹಾಡಿ ಕುಣಿದರು.
ವಿದ್ಯಾರ್ಥಿ ಕೌಶಿಕ್ ರಚಿಸಿದ ಶಿವರಾಜ್ ದಂಪತಿಗಳ ರೇಖಾ ಚಿತ್ರವನ್ನು ದಂಪತಿಗೆ ಹಸ್ತಾಂತರಿಸಲಾಯಿತು.
ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳು ವೇದಿಕೆಯಲ್ಲಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕಲಾ ಪ್ರದರ್ಶನ:ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಲಾಕೃತಿಗಳಿಂದ ಸಿಂಗರಿಸಲ್ಪಟ್ಟ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ವಿದ್ಯಾರ್ಥಿಗಳೇ ಪ್ರಮುಖ ಆಕರ್ಷಣೆ ಆಗಿದ್ದರು.
ಅಷ್ಟು ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಗುಜುರಾತ್ ಮತ್ತು ದೇಶದ ವಿವಿಧ ಭಾಗಗಳ ಆಹಾರ ಸವಿಯುವ ಸದಾವಕಾಶವು ವಿದ್ಯಾರ್ಥಿಗಳಿಗೆ ದೊರೆಯಿತು. ಕೇರಳ ಶೈಲಿಯ ಕಪ್ಪಾ ಮತ್ತು ಮೀನು ಸಾರು, ಇಡಿಯಪ್ಪಂ, ಪರಂಪುರಿ, ಕಟ್ಟನ್ ಚಾಯ, ಮಲಬಾರ ಬಿರಿಯಾನಿ, ತುಳುನಾಡಿನ ಕೋರಿ ರೂಟ್ಟಿ, ಕೋಳಿ ಸುಕ್ಕ, ಮೀನು ಪುಳಿಮುಂಚಿ, ಮೂಡೆ, ಗುಂಡ, ಹೋಳಿಗೆ ರಸಾಯನ, ಈಶಾನ್ಯ ಭಾರತದ ಪೈಕಿ ವಿಶೇಷವಾಗಿ ಮಣಿಪುರಿಯ ಸಿಂಗ್ಜು, ಕೆಲಿಚ್ಚನ್, ಇಮ್ಲಿ ಜ್ಯೂಸ್, ಮ್ಯಾಮೋಸ್, ಇತರ ಭಾರತದ ಹೈದರಾಬಾದ್ ಬಿರಿಯಾನಿ, ಮೊಹಬತ್ ಕಿ ಶರಬತ್, ಚೋಲೆ ಭತುರೆ – ಆಮ್ ರಾಸ್, ಕಚೋರಿ, ಮೊಮೊಸ್ ಮಹಾರಾಷ್ಟ್ರ ಮತ್ತು ಗುಜರಾತಿನ ಪಾನಿಪುರಿ, ಸೇವ್ ಪುರಿ, ಮಸಾಲಾ ಪುರಿ, ದಹಿ ಕಚೋರಿ ಮತ್ತಿತರ ಆಹಾರ ಖಾದ್ಯಗಳು ಬಾಯಿ ನೀರೂರಿಸಿದವು.