ಗೆರಟೇ…ಗೆರಟೆ…ಗೆರಟೆ…ಗೆರಟೆ….

ಭಾರೀ ಬೇಡಿಕೆ ಪಡೆಯುತ್ತಿರುವ ಕರಾವಳಿಯ ತೆಂಗಿನ ಚಿಪ್ಪುಗಳು(ಗೆರಟೆಗಳು)

“ ಒಂದು ಸಂದರ್ಭದಲ್ಲಿ ತ್ಯಾಜ್ಯವೆಂದು ಪರಿಗಣಿಸಲ್ಪಡುತ್ತಿದ್ದ ತೆಂಗಿನ ಗೆರಟೆಗಳಿಗೆ ಇಂದು ಭಾರೀ ಬೇಡಿಕೆ ಬಂದಿದೆ. ಕೇವಲ ದೇಸೀ ಮಟ್ಟದಲ್ಲಷ್ಟೇ ಅಲ್ಲ, ಜಾಗತೀಕ ಮಟ್ಟದಲ್ಲಿ ಕರಾವಳಿಯ ತೆಂಗಿನ ಗೆರಟೆಗಳು ಸದ್ದು ಮಾಡುತ್ತಿವೆ. ಇದೊಂದು ದೊಡ್ಡ ಉದ್ಯಮವಾಗಿ ಪರವರ್ತನೆಯಾಗುತ್ತಿದ್ದು, ತೆಂಗಿನ ಕಾಯಿಯಂತೆಯೇ ಮೌಲ್ಯಯುತ ವಸ್ತುವಾಗಿ ಗೆರಟೆಗಳು ಪರಿಗಣಿಸಲ್ಪಡುತ್ತಿವೆ.”

– ಹರೀಶ್ ಕೆ.ಆದೂರು

ಮೂಡುಬಿದಿರೆ: ತೆಂಗಿನಕಾಯಿ ಚಿಪ್ಪುಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಹೆಚ್ಚುತ್ತಿದೆ. ಹಿಂದೆ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ಈ ವಸ್ತು ಈಗ ಬಹು ಮೌಲ್ಯಯುತ ಸಂಪನ್ಮೂಲವಾಗಿ ರೂಪಾಂತರಗೊAಡಿದ್ದು, ಕೋಟ್ಯಂತರ ಮೌಲ್ಯದ ಮಾರುಕಟ್ಟೆಯನ್ನು ಹೊಂದಿದೆ. ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತೆಂಗಿನ ಚಿಪ್ಪುಗಳನ್ನು ಆಕ್ಟಿವೇಟೆಡ್ ಕಾರ್ಬನ್, ಚಾರ್ಕೋಲ್ ಬ್ರಿಕೆಟ್‌ಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಕೈಗಾರಿಕಾ ಉತ್ಪನ್ನಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.


ಹಲವರಿಗೆ ಉದ್ಯೋಗ: ಇದೀಗ ಗೆರಟೆಗಳ ಆಯುವಿಕೆ, ಅಥವಾ ಸಂಗ್ರಹವೇ ಒಂದು ದೊಡ್ಡ ವ್ಯವಹಾರವಾಗಿ ಪರಿವರ್ತನೆಯಾಗಿದೆ. ಮನೆ ಮನೆಗೆ ವಾಹನಗಳಲ್ಲಿ ಬಂದು ಗೆರಟೆಗಳನ್ನು ಆಯ್ದು ಕೊಂಡೊಯ್ಯುವ ಕಾರ್ಯ ನಡೆಯತ್ತಿದೆ. ನೆರೆಯ ತಮಿಳ್ನಾಡು, ಕೇರಳ ಭಾಗದಿಂದ ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಮನೆಯಲ್ಲಿರುವ ಗೆರಟೆಗಳನ್ನು ಸಂಗ್ರಹಿಸಿ ಕೊಂಡೊಯ್ಯುತ್ತಿದ್ದಾರೆ. ಕರಾವಳಿ ಕರ್ನಾಟಕದಾದ್ಯಂತ ತಮಿಳ್ನಾಡಿನ ವ್ಯಾಪಾರಿಗಳು ವಾರಕ್ಕೆ ಎರಡು ಬಾರಿ ಆಗಮಿಸಿ ಗೆರಟೆ ಸಂಗ್ರಹಿಸತೊಡಗಿದ್ದಾರೆ.


ಪೈಪೋಟಿ: ಗೆರಟೆ ಸಂಗ್ರಹದಲ್ಲೂ ಪೈಪೋಟಿ ಆರಂಭವಾಗಿದೆ. ತಮಿಳ್ನಾಡು ಮೂಲದ ವ್ಯಾಪಾರಿಗಳು ಎರಡು ಗೆರಟೆ(ಒಂದು ತೆಂಗಿನಕಾಯಿ)ಗಳಿಗೆ ಒಂದು ರೂಪಾಯಿ ನಿಗಧಿಮಾಡಿದರೆ, ಕೇರಳ, ಕಾಸರಗೋಡು ಭಾಗದ ವ್ಯಾಪಾರಿಗಳು ಒಂದೂವರೆ ರುಪಾಯಿ ಹಣ ನೀಡಿ ಗೆರಟೆ ಸಂಗ್ರಹಿಸಿತ್ತಿದ್ದಾರೆ. ಎಷ್ಟೇ ಗೆರಟೆಗಳಿದ್ದರೂ ತಕ್ಷಣವೇ ಹಣ ಕೊಟ್ಟು ಗೆರಟೆ ಖರೀದಿಸಿ ಕೊಂಡೊಯ್ಯುತ್ತಾರೆ. ಗೂಡ್ಸ್ ವಾಹನಕ್ಕೆ ಮೈಕ್ ಅಳವಡಿಸಿ, “ಗೆರಟೇ…ಗೆರಟೇ…ಚಿಪ್ಪಿ…ಚಿಪ್ಪೀ….” ಎಂದು ದೊಡ್ಡದಾಗಿ ಹೇಳುತ್ತಾ ಗೆರಟೆ ಸಂಗ್ರಹಿಸುವ ಕಾಯಕದಲ್ಲಿ ತೊಡಗುತ್ತಿದ್ದಾರೆ. ಮೂಡುಬಿದಿರೆಯ ವ್ಯಾಪ್ತಿಯ ಎಲ್ಲಾ ಮನೆಗಳು, ವಠಾರಗಳಲ್ಲೂ ಈ ದೃಶ್ಯ ಸಾಮಾನ್ಯವಾಗಿದೆ.


ಬೇಡಿಕೆಯ ಪ್ರಮುಖ ಕಾರಣಗಳು: ಇಂದು ಗೆರಟೆ ದೊಡ್ಡ ಉದ್ಯಮವಾಗಿ ಪರಿವರ್ತನೆಯಾಗಿದೆ. ಗೆರಟೆಗಳನ್ನು ನೆರೆಯ ಕೇರಳ ರಾಜ್ಯದಲ್ಲಿ ವ್ಯಾಪಕವಾಗಿ ಬಳಸಿ ದೊಡ್ಡ ಉದ್ದಿಮೆಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಆಕ್ಟಿವೇಟೆಡ್ ಕಾರ್ಬನ್ ಮತ್ತು ನೀರು ಶುದ್ಧೀಕರಣ ವ್ಯವಸ್ಥೆಗೆ ಬಳಸಲಾಗುತ್ತಿದೆಯಂತೆ. ತೆಂಗಿನ ಚಿಪ್ಪುಗಳು ಉತ್ತಮ ಗುಣಮಟ್ಟದ ಆಕ್ಟಿವೇಟೆಡ್ ಕಾರ್ಬನ್ ತಯಾರಿಕೆಗೆ ಅತ್ಯುತ್ತಮ ಮೂಲವಾಗಿದ್ದು, ನೀರು ಮತ್ತು ಗಾಳಿಯ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕಾಗಿಯೇ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ಗೆರಟೆಗೆ ಆದ್ಯತೆ ದೊರಕಲಾರಂಭಿಸಿವೆ.

ಪರಿಸರ ಸ್ನೇಹಿ ಪ್ರವೃತ್ತಿ: ನೈಸರ್ಗಿಕ ಹಾಗೂ ನವೀಕರಿಸಬಹುದಾದ ವಸ್ತುವಾಗಿರುವುದರಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. *ಚಾರ್ಕೋಲ್ ಮತ್ತು ಕೈಗಾರಿಕಾ ಬಳಕೆಗೆ ಇದನ್ನು ಬಳಸಲಾಗುತ್ತಿದೆ. ಉತ್ತಮ ಗುಣಮಟ್ಟದ ಇಂಧನ ಬ್ರಿಕೆಟ್‌ಗಳು ಮತ್ತು ಕೈಗಾರಿಕಾ ಉಪಯೋಗಗಳಿಗೆ ಚಿಪ್ಪುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ.


ಗೃಹೋಪಯೋಗಿ ಮತ್ತು ಕೈಗಾರಿಕಾ ವಸ್ತುಗಳು: ಪಾಲಿಷ್ ಮಾಡಿದ ತೆಂಗಿನ ಚಿಪ್ಪುಗಳಿಂದ ಪಾತ್ರೆಗಳು, ಚಮಚಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಕೇರಳ ಮತ್ತು ತಮಿಳ್ನಾಡು ಪ್ರದೇಶಗಳಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಉದ್ದಿಮೆ ರೂಪದಲ್ಲಿ ಬೆಳೆಸಿರುವುದರಿಂದಾಗಿ ತೆಂಗಿನ ಗುಣಮಟ್ಟದ ಚಿಪ್ಪುಗಳಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿವೆ.
ತೆಂಗಿನ ಚಿಪ್ಪುಗಳಿಂದ ತಯಾರಿಸಲ್ಪಟ್ಟ ಇದ್ದಿಲು ಹಾಗೂ ಬ್ರಿಕೆಟ್‌ಗಳಿಗೆ ಜಾಗತಿಕ ಮಟ್ಟದಲ್ಲೂ ಭಾರೀ ಬೇಡಿಕೆಯಿದೆ.
ಏಷ್ಯಾ-ಪ್ಯಾಸಿಫಿಕ್ ಪ್ರದೇಶವು ಉತ್ಪಾದನೆ ಮತ್ತು ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು, ಚೀನಾ, ಭಾರತ ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿವೆ. ಭಾರತದಿಂದ ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳಿಗೆ ಚಾರ್ಕೋಲ್ ರಫ್ತು ಹೆಚ್ಚುತ್ತಿದೆ. ಈ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಹಿಂದೆ ತ್ಯಾಜ್ಯವಾಗಿದ್ದ ತೆಂಗಿನ ಚಿಪ್ಪುಗಳು ಈಗ ವಲಯ ಆರ್ಥಿಕತೆಯ ಪ್ರಮುಖ ಅಂಶವಾಗಿ ಪರಿಣಮಿಸುತ್ತಿವೆ ಎಂಬುದು ಗಮನಾರ್ಹ ಅಂಶ.

ಚಾರ್ಕೋಲ್ ಬ್ರಿಕೆಟ್‌ಗಳು ಅಂದರೆ ಇದ್ದಿಲಿನ ಪುಡಿಯನ್ನು ಸಂಕುಚಿತಗೊಳಿಸಿ ತಯಾರಿಸಿದ ಇಟ್ಟಿಗೆಯಾಕಾರದ ಸಣ್ಣ ಇಂಧನ ತುಂಡುಗಳು. ಇವುಗಳನ್ನು ಗೆರಟೆ, ಮರ, ಮರದ ಪುಡಿ ಅಥವಾ ಕೃಷಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಬೆಂಕಿ ಹಚ್ಚಲು ದೀರ್ಘಕಾಲದವರೆಗೆ ಉರಿಯುವ ಇಂಧನವಾಗಿ ಬಳಸಲಾಗುತ್ತದೆ

ಪ್ರಮುಖ ಬಳಕೆಗಳು:
• ನೀರು ಮತ್ತು ಗಾಳಿ ಶುದ್ಧೀಕರಣಕ್ಕೆ ಆಕ್ಟಿವೇಟೆಡ್ ಕಾರ್ಬನ್
• ಮಸ್ಕಿಟೋ ಕಾಯಿಲ್ ಮತ್ತು ಅಗರ್ಬತ್ತಿ ತಯಾರಿಕೆ
• ಪ್ಲೈವುಡ್ ಮತ್ತು ರೆಸಿನ್ ಗ್ಲೂಗಳಲ್ಲಿ ಫಿಲ್ಲರ್
• ಫರ್ನಿಚರ್ ಮತ್ತು ಕಟ್ಟಡ ದುರಸ್ತಿ ಕಾರ್ಯಗಳಲ್ಲಿ ಅಬ್ರೇಸಿವ್ ವಸ್ತು

 

 

 

 

 

 

Share

Leave a Reply

Your email address will not be published. Required fields are marked *