ವಾರದ ಮಾತುಕತೆ: ಹರೀಶ್ ಕೆ.ಆದೂರು.
“ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ ಖ್ಯಾತಿಯ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಹಿಂದೂಸ್ತಾನಿ ಗಾಯಕ. ಸ್ವಾಮಿ ಹರಿದಾಸ ಮತ್ತು ಕನಕದಾಸರು ರಚಿಸಿದ ಭಕ್ತಿಗೀತೆಗಳ ಗಾಯನಕ್ಕೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಉತ್ತರ ಕರ್ನಾಟಕದ ಬಳ್ಳಾರಿ ಪ್ರದೇಶದ ಲಕ್ಷ್ಮಿಪುರದಲ್ಲಿ ಜನಿಸಿದರು. ತಂದೆ ಹುಲೆಪ್ಪ ಜನಪದ ಜಾನಪದ ಗಾಯಕ ಮತ್ತು ಚರ್ಮದ ಬೊಂಬೆಗಾರರಾಗಿದ್ದರು . ೧೯೬೮ ರಲ್ಲಿ, ಅವರು ೧೫ ವರ್ಷದವರಾಗಿದ್ದಾಗ, ವೆಂಕಟೇಶ್ ಅವರನ್ನು ಸೋದರ ಮಾವ ನಾಡೋಜ ಬೆಳಗಲ್ಲು ವೀರಣ್ಣ ಅವರು ಗದಗದಲ್ಲಿರುವ ವೀರಶೈವ ಸಂತ ಮತ್ತು ಹಿಂದೂಸ್ತಾನಿ ಸಂಗೀತಗಾರ ಪುಟ್ಟರಾಜ್ ಗವಾಯಿ ನಡೆಸುತ್ತಿದ್ದ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದೊಯ್ದರು. ಮುಂದಿನ ೧೨ ವರ್ಷಗಳ ಕಾಲ, ಅವರು ಆಶ್ರಮದಲ್ಲಿ ವಾಸಿಸುತ್ತ ಗವಾಯಿ ಅವರ ಅಡಿಯಲ್ಲಿ ಗ್ವಾಲಿಯರ್ ಮತ್ತು ಕಿರಾಣಾ ಶೈಲಿಗಳಲ್ಲಿ ಹಿಂದೂಸ್ತಾನಿ ಗಾಯನವನ್ನು ಕಲಿತರು. ಕುಮಾರ್ ಈ ಶೈಲಿಗಳನ್ನು ತಮ್ಮ ಪ್ರಸ್ತುತಿಗಳಲ್ಲಿ ಸಂಯೋಜಿಸುತ್ತಾರೆ, ಆದರೂ ಅವರು ಈ ಘರಾಣಾಗಳನ್ನು ಮೀರಿದ ಪ್ರಭಾವಗಳನ್ನು ಒಪ್ಪಿಕೊಂಡಿದ್ದಾರೆ. ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಸಂಸ್ಥೆ ಆಯೋಜಿಸಿದ `ಎಕ್ಸಲೆಂಟ್ ಸಂಗೀತ ಸಂಜೆ’ ಕಾರ್ಯಕ್ರಮದಲ್ಲಿ ನಿರರ್ಗಳವಾಗಿ ಎರಡೂಮುಕ್ಕಾಲು ತಾಸು ಅತ್ಯಪೂರ್ವ ರೀತಿಯ ಹಾಡುಗಳನ್ನು ಪ್ರಸ್ತುತ ಪಡಿಸಿ ಜನಮೆಚ್ಚುಗೆಗೆ ಪಾತ್ರರಾದರು. ನಂತರ ನಡೆಸಿದ ವಿಶೇಷ ಮಾತುಕತೆಯ ಸಾರಾಂಶ ನಮ್ಮ ಓದುಗರಿಗಾಗಿ.”
ಪ್ರಶ್ನೆ: ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಕ್ಕೆ ಬಂದು ಕುಳಿತುಕೊಳ್ಳುವುದು ಏಕೆ ಮಹತ್ವದ್ದು?
ಉತ್ತರ: ವಿದ್ಯಾರ್ಥಿಗಳು ಬಂದು ಕೂತಿರುವುದೇ ಒಂದು ದೊಡ್ಡ ಭಾಗ್ಯ. ಇದು ಅತ್ಯಂತ ಸಂತೋಷದ ವಿಷಯ. ಅವರ ಆಸಕ್ತಿ ಮತ್ತು ಉಪಸ್ಥಿತಿಯೇ ಕಾರ್ಯಕ್ರಮದ ಸಾರ್ಥಕತೆಯಾಗಿದೆ. ಇದರಿಂದಾಗಿ ಅವರ ಮನೋವಿಕಾಸವಾಗುತ್ತದೆ. ಸಂಗೀತಕ್ಕೆ ಒಂದು ದೊಡ್ಡ ಗೌರವ ಸಿಕ್ಕಿದಂತೆ ಎಂದು ನಾನು ಭಾವಿಸುತ್ತಿದ್ದೇನೆ.
ಪ್ರಶ್ನೆ: ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶಾಸ್ತ್ರೀಯ ಸಂಗೀತವನ್ನು ಏಕೆ ಕೇಳಬೇಕು?
ಉತ್ತರ: ಶಾಸ್ತ್ರೀಯ ಸಂಗೀತವನ್ನು ಹಂತ ಹಂತವಾಗಿ ಕೇಳಿದರೆ ಅದರ ಅರ್ಥ, ಆಳ ಮತ್ತು ಸೌಂದರ್ಯ ಸ್ವಯಂ ತಿಳಿಯುತ್ತದೆ. ಇದು ವ್ಯಕ್ತಿತ್ವವನ್ನು ನಿಧಾನವಾಗಿ ರೂಪಿಸುತ್ತದೆ. ಮನಸ್ಸನ್ನು ಕೇಂದ್ರೀಕರಿಸಿ ಓದಿನತ್ತ ಅವರನ್ನು ಕೊಂಡೊಯ್ಯುವಲ್ಲಿ ಸಹಾಯಮಾಡುತ್ತದೆ.

ಪ್ರಶ್ನೆ: ಸಂಗೀತ ಕೇಳುವಲ್ಲಿ ವಿದ್ಯಾರ್ಥಿಗಳು ಯಾವ ಅಭ್ಯಾಸ ಬೆಳೆಸಿಕೊಳ್ಳಬೇಕು?
ಉತ್ತರ: ಸುಮ್ಮನೆ ಕುಳಿತು ಮನಸ್ಸಿಟ್ಟು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲರೂ ಕಲಿಯಲು ಸಾಧ್ಯವಿಲ್ಲ; ಆದ್ದರಿಂದ ಮೊದಲು ಉತ್ತಮ ಕೇಳುಗರಾಗುವುದು ಅತ್ಯಂತ ಮುಖ್ಯ.
ಪ್ರಶ್ನೆ: ನಿರಂತರವಾಗಿ ಸಂಗೀತ ಕೇಳಿದರೆ ಏನು ಪರಿಣಾಮ ಬೀರುತ್ತದೆ?
ಉತ್ತರ: ಕೇಳ್ತಾ ಕೇಳ್ತಾ ಹೋದರೆ ಸಂಗೀತ ನಮ್ಮೊಳಗೆ ಅದ್ಭುತವಾದ ನೆಮ್ಮದಿಯನ್ನು ನೀಡುತ್ತದೆ. ಇದು ಮನಸ್ಸಿಗೆ ಅಪಾರ ಶಾಂತಿಯನ್ನು ಕೊಡುತ್ತದೆ.
ಪ್ರಶ್ನೆ: ಸಂಗೀತ ಮತ್ತು ದೇವರ ಧ್ಯಾನದ ನಡುವೆ ಇರುವ ಸಾಮ್ಯವೇನು?
ಉತ್ತರ: ದೇವರ ಧ್ಯಾನ ಮಾಡಿದಷ್ಟೇ ಸಂಗೀತವನ್ನು ಶ್ರದ್ಧೆಯಿಂದ ಕೇಳಿದರೂ ನಮ್ಮೊಳಗೆ ಏಕಾಗ್ರತೆ ಮತ್ತು ಶಾಂತಿ ಸಿಗುತ್ತದೆ. ಸಂಗೀತದಿoದ ಮನಸ್ಸು ಕೇಂದ್ರೀಕೃತವಾಗುತ್ತದೆ.
ಪ್ರಶ್ನೆ: ಸಂಗೀತವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೇಗೆ ಸಹಕಾರಿಯಾಗುತ್ತದೆ?
ಉತ್ತರ: ಸಂಗೀತದಿAದ ಮನಸ್ಸು ಸ್ಥಿರವಾಗುವುದರಿಂದ ಪಠ್ಯಾಭ್ಯಾಸಕ್ಕೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಇದರಿಂದ ಕಲಿಕೆಯಲ್ಲಿ ಆಸಕ್ತಿ ಮತ್ತು ಪರಿಣಾಮಕಾರಿತ್ವ ಹೆಚ್ಚುತ್ತದೆ.

ಪ್ರಶ್ನೆ: ವಿದ್ಯಾರ್ಥಿಗಳಿಗೆ ಸಂಗೀತ ಕೇಳುವ ಅವಕಾಶಗಳು ಎಷ್ಟು ಲಭ್ಯವಿವೆ?ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮಗಳ ಅಗತ್ಯವೇನು?
ಉತ್ತರ: ವಿದ್ಯಾರ್ಥಿಗಳಿಗೆ ಸಂಗೀತವನ್ನು ಆಲಿಸುವ ಭಾಗ್ಯ ಎಷ್ಟು ಕಡೆ ಸಿಗುತ್ತದೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಪ್ರಶ್ನಿಸಬೇಕು. ಇಂತಹ ಅವಕಾಶಗಳು ವಿರಳ. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವರ್ಷಕ್ಕೆ ಕನಿಷ್ಠ ಮೂರು ಬಾರಿಯಾದರೂ ಇಂತಹ ಸಂಗೀತ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯೋಜಿಸುವುದು ಒಳಿತು.
ಇದು ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ಸಾಂಸ್ಕೃತಿಕವಾಗಿ ಬಹಳ ಅನುಕೂಲಕರ.
ಪ್ರಶ್ನೆ: ಸಂಗೀತವು ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?
ಉತ್ತರ: ಸಂಗೀತ ವಿದ್ಯಾರ್ಥಿಗಳ ಮೇಲೆ ಅತ್ಯಂತ ಉತ್ತಮ ಮತ್ತು ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ ಇಂತಹ ಅಭ್ಯಾಸವನ್ನು ಅನುಸರಿಸುವವರು ಬಹಳ ಕಡಿಮೆ.
ಪ್ರಶ್ನೆ: ಸಂಸ್ಕಾರಗಳ ಮಹತ್ವವೇನು?
ಉತ್ತರ: ಮನುಷ್ಯನ ಮನಸ್ಸು ಸಹಜವಾಗಿಯೇ ಚಂಚಲ. ಅದಕ್ಕೆ ಸಂಸ್ಕಾರ ಅತ್ಯಂತ ಅಗತ್ಯ. ಸಂಸ್ಕಾರ ಜೀವನದ ದಿಕ್ಕನ್ನೇ ನಿರ್ಧರಿಸುತ್ತದೆ.
ಪ್ರಶ್ನೆ: ಸಂಸ್ಕಾರಗಳನ್ನು ನಾವು ಯಾರಿಂದ ಕಲಿಯಬೇಕು?
ಉತ್ತರ: ಹಿರಿಯರು ಮತ್ತು ಗುರುಗಳಿಂದ ಸಂಸ್ಕಾರಗಳನ್ನು ಕಲಿಯಬೇಕು. ಅವರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಬೇಕು.
ಪ್ರಶ್ನೆ: ವಿದ್ಯಾಭ್ಯಾಸದಲ್ಲಿ ಯಶಸ್ಸು ಪಡೆದಾಗ ಏನು ನೆನಪಿಟ್ಟುಕೊಳ್ಳಬೇಕು?
ಉತ್ತರ: ವಿದ್ಯೆ ಕಲಿಯುವುದು ಸಾಮಾನ್ಯ. ವಿದ್ಯಾವಂತರಾಗಬಹುದು, ರ‍್ಯಾಂಕ್ ಪಡೆಯಬಹುದು. ಆದರೆ ಆ ಯಶಸ್ಸಿಗೆ ಕಾರಣರಾದ ಗುರುಗಳು ಮತ್ತು ಹಿರಿಯರನ್ನು ಎಂದಿಗೂ ಮರೆಯಬಾರದು. ಅವರ ಮಾರ್ಗದರ್ಶನ ಜೀವನಪೂರ್ತಿ ಉಳಿಯುವಂತೆ ನೋಡಿಕೊಳ್ಳಬೇಕು.
ಪ್ರಶ್ನೆ: ಹೆತ್ತವರ ಪಾತ್ರ ವಿದ್ಯಾರ್ಥಿ ಜೀವನದಲ್ಲಿ ಏನು?
ಉತ್ತರ: ಹೆತ್ತವರ ಆಶೆಗಳಿಗೆ ತಣ್ಣೀರೆರಚಬಾರದು. ಅವರ ಸ್ಮರಣೆ ಸದಾ ನಮ್ಮೊಳಗಿರಬೇಕು.
ಪ್ರಶ್ನೆ: ನಮ್ಮ ಆಚಾರ-ವಿಚಾರ ಹೇಗಿರಬೇಕು?
ಉತ್ತರ: ನಮ್ಮ ಆಚಾರ ಮತ್ತು ವಿಚಾರಗಳು ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಇಂತಹ ಜೀವನ ಶೈಲಿಯನ್ನು ದೇವರು ಮೆಚ್ಚುತ್ತಾನೆ.
ಪ್ರಶ್ನೆ: ವಿದ್ಯಾರ್ಥಿಗಳು ದಿನನಿತ್ಯ ಸಂಗೀತಕ್ಕೆ ಎಷ್ಟು ಸಮಯ ಮೀಸಲಿಡಬೇಕು?
ಉತ್ತರ: ವಿದ್ಯಾಭ್ಯಾಸದ ಜೊತೆಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ಸಂಗೀತ ಮತ್ತು ಸಾಹಿತ್ಯಕ್ಕೆ ಮೀಸಲಿಡಬೇಕು. ಇದು ಜೀವನಕ್ಕೆ ಸಮತೋಲನ ನೀಡುತ್ತದೆ.