ಪತ್ರಕರ್ತನ ಡೈರಿಯ ಪುಟಗಳಿಂದ… ಭಾಗ ೧

ಪತ್ರಕರ್ತನ ಡೈರಿಯ ಪುಟಗಳಿಂದ… ಭಾಗ ೧

ಓ ಬಲೆ ಬಲೆ…ನಮಸ್ಕಾರ…
ಬಿಳಿ ಬಣ್ಣದ ದೊಡ್ಡ ಕಾರು. ಅದರ ಮುಂಭಾಗದಲ್ಲಿ `ಪ್ರೆಸ್’ ಎಂದು ಕೆಂಬಣ್ಣದಲ್ಲಿ ಬರೆದಿತ್ತು. ಶ್ವೇತ ವರ್ಣದ ಫುಲ್ ಕೈ ಅಂಗಿ, ಕಪ್ಪು ಪ್ಯಾಂಟ್, ಕಾಲಿಗೆ ಶೂ, ಕಣ್ಣಿಗೊಂದು ಕಪ್ಪು ಗ್ಲಾಸ್…ಚಾಲಕನ ಎಡಬದಿಯ ಸೀಟಿನಿಂದ ಇಳಿಯುತ್ತಿದ್ದಂತೆಯೇ ಅವರನ್ನು `ಓ ಬಲೆ ಬಲೆ..ನಮಸ್ಕಾರ’ ಎಂದು ರಸ್ತೆಯ ಬದಿಯಿಂದಲೇ ಸ್ವಾಗತಿಸಿದ್ದ ರೀತಿ ನನಗೆ ನಿಜಕ್ಕೂ ಅಚ್ಚರಿ ತಂದಿತ್ತು.ಈ ಘಟನೆ ನಡೆದು ವರುಷ ೨೦ ಸಂದಿರಬಹುದು… ನಿಜಕ್ಕೂ ಅವರು ಯಾರು ಎಂದು ಅಂದೂ ಗೊತ್ತಾಗಲಿಲ್ಲ…ಇಂದೂ ಗೊತ್ತಿಲ್ಲ…ಅಂತೂ ಅವರೊಬ್ಬ ಪತ್ರಕರ್ತ ಎಂದಷ್ಟೇ ನನಗೆ ಗೊತ್ತು. ಮೂಡುಬಿದಿರೆಯಲ್ಲಿ ಅಂತಾರಾಷ್ಟಿçÃಯ ಮಟ್ಟದ ಪ್ರತಿಷ್ಠಿತ ಕಾರ್ಯಕ್ರಮವೊಂದು ಆರಂಭಗೊಳ್ಳಲಿತ್ತು. ಅದರ ಉದ್ಘಾಟನೆಗೆ ಘನಮಾನ್ಯರ ಆಗಮನವಾಗುತ್ತಿತ್ತು. ಅವರನ್ನು ಹೆದ್ದಾರಿ ಬದಿಯಿಂದ ಸ್ವಾಗತಿಸಲು ಸಂಘಟಕರು ನಿಂತಿದ್ದರು. ಒಂದಷ್ಟು ಕಲಾಸಕ್ತರು ಅಲ್ಲಿದ್ದರು. ಅವರ ನಡುವೆ ನಾನೂ ಇದ್ದೆ. ಆಗ ನನಗೆ ೨೧-೨೨ರ ಸುಮಾರು. ನಾನೂ ದೈನಿಕವೊಂದರ ಅರೆಕಾಲಿಕ ಪತ್ರಕರ್ತನಾಗಿದ್ದೆ. ಬರೆಯುವ ಹುಚ್ಚು ಮೊದಲೇ ಇದ್ದುದರಿಂದ ಪತ್ರಿಕೆಯಲ್ಲಿ ಪತ್ರಕರ್ತ ಹುದ್ದೆ ಸುಲಭವಾಗಿ ಸಿಕ್ಕಿತ್ತು. ಅದಕ್ಕೆ ಸೂಕ್ತ ನ್ಯಾಯಕೊಡಲು ಸಾಕಷ್ಟು ಶ್ರಮಿಸಿದೆ, ಇಂದಿಗೂ ಶ್ರಮಿಸುತ್ತಿದ್ದೇನೆ.


ದೊಡ್ಡ ಕಾರಿನಲ್ಲಿ ಬಿಳಿ ಅಂಗಿ ಹಾಕಿ ಬಂದ ಪತ್ರಕರ್ತರು ಕಾರಿಳಿಯುತ್ತಿದ್ದಂತೆಯೇ ಸಂಘಟಕರು ಅವರತ್ತ ತೆರಳಿ ಎರಡೂ ಕರಗಳನ್ನು ಜೋಡಿಸಿ, ಅವರನ್ನು ಸ್ವಾಗತಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅಂದೇ ನಾನು ನನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದೆ. ಒಂದಲ್ಲಾ ಒಂದು ದಿನ ನಾನೂ ದೊಡ್ಡ ಕಾರಿನಲ್ಲಿ ಪ್ರೆಸ್ ಎಂದು ಸ್ಟಿಕ್ಕರ್ ಅಂಟಿಸಿ ಇದೇ ರೀತಿ ಬರಲೇ ಬೇಕು…ಎಂಬುದಾಗಿ! ಅದನ್ನು ಡೈರಿಯಲ್ಲಿ ಬರೆದಿಟ್ಟಿದ್ದೆ ಕೂಡಾ…!


ನನ್ನಲ್ಲಿ ಕಾರು ಬಿಡಿ, ಮೊಬೈಕು ಕೂಡಾ ಇದ್ದಿರದ ಸಮಯ. ಬಸ್ಸಿನಲ್ಲಿ ವರದಿಗಾರಿಕೆಗೆ ಓಡಾಡುತ್ತಿದ್ದೆ. ರಾಜ್ಯಮಟ್ಟದ ಪತ್ರಿಕೆಯ ಅರೆಕಾಲಿಕ ವರದಿಗಾರನಾಗಿದ್ದರೂ, ನನಗೆ ಬರೆಯಲು ಸಾಕಷ್ಟು ಅವಕಾಶವನ್ನು ಪತ್ರಿಕೆ ನೀಡಿತ್ತು. ಮೂಡುಬಿದಿರೆ ಆಗ ತಾಲೂಕಾಗಿರಲಿಲ್ಲ. ಕೇವಲ ಹೋಬಳಿ ಕೇಂದ್ರವಷ್ಟೇ …ನಾನು ಹೋಬಳಿಯ ವರದಿಗಾರ, ಅದೂ ಅರೆಕಾಲಿಕ ವರದಿಗಾರ. ಆದರೂ ನಾನು ಬರೆದ ವರದಿ, ವಿಶೇಷ ವರದಿ, ವಿಶ್ಲೇಷಣೆ, ಲೇಖನಗಳು ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಏನಾದರೊಂದು ಹೊಸತನ ಕೊಡಬೇಕು, ಆ ಮೂಲಕ ನಾನು ಗುರುತಿಸಿಕೊಳ್ಳಬೇಕೆಂಬ ಹಪಹಪಿ ನನ್ನದಾಗಿತ್ತು. ಆ ಕಾರಣಕ್ಕಾಗಿಯೇ ನಿರಂತರ ಹುಡುಕಾಟ, ನಿರಂತರ ಹೊಸ ಹೊಸ ವಿಚಾರಗಳನ್ನು ಆಯ್ದು ಸುದ್ದಿ ಮಾಡುತ್ತಿದ್ದೆ. ನನ್ನ ಬೈಲೈನ್ ಸಹಿತ ಪತ್ರಿಕೆಯಲ್ಲಿ ಅಚ್ಚಾಗುತ್ತಿತ್ತು…ನನಗೂ ಅದೊಂದು ಸಂತೃಪ್ತಿ ನೀಡತೊಡಗಿತ್ತು…
ಮನದ ಮೂಲೆಯಲ್ಲಿ `ದೊಡ್ಡ ಕಾರು, ಪ್ರೆಸ್ ಸ್ಟಿಕ್ಕರ್’ ನಿರಂತರವಾಗಿ ನನ್ನನ್ನು ಕಾಡುತ್ತಲೇ ಇತ್ತು… ಮುಂದೊAದು ದಿನ ಕನಸು ನನಸಾಗಿಸಲೇ ಬೇಕೆಂಬ ಛಲ ದಿನ ದಿನವೂ ಹೆಚ್ಚಾಗುತ್ತಲೇ ಹೋಯಿತು…
(ಮುಂದುವರಿಯುತ್ತದೆ….)

Share

Leave a Reply

Your email address will not be published. Required fields are marked *