ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್ ನಿಯೋಗದಿಂದ ತಾಂಜಾನಿಯಾ ಭೇಟಿ
ಮೂಡುಬಿದಿರೆ: ಗೋಡಂಬಿ ಉತ್ಪಾದನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್ (ಕೆಸಿಎಂಎ) ಅಧ್ಯಕ್ಷ ಎ.ಕೆ. ರಾವ್ ನೇತೃತ್ವದ 15 ಮಂದಿ ಗೇರು ಉದ್ಯಮಿಗಳ ನಿಯೋಗವು ಇತ್ತೀಚಿಗೆ ಆಫ್ರಿಕಾದ ತಾಂಜಾನಿಯಾ ದೇಶಕ್ಕೆ ಭೇಟಿ ನೀಡಿ, ತಾಂಜಾನಿಯಾ ಕ್ಯಾಶ್ಯೂ ಬೋರ್ಡ್ (ಸಿಬಿಟಿ) ಡೈರೆಕ್ಟರ್ ಜನರಲ್ ಅಲ್ಫ್ರೆಡ್ ಫ್ರಾನ್ಸಿಸ್ ಅವರೊಂದಿಗೆ ಸಂವಾದ ನಡೆಸಿದೆ.

ಈ ಸಂದರ್ಭದಲ್ಲಿ ಗೋಡಂಬಿ ಹರಾಜಿನಲ್ಲಿ ಸಿಬಿಟಿಯ ಪ್ರಕ್ರಿಯೆಯನ್ನು ಉಪಕ್ರಮಗಳನ್ನು ಎ.ಕೆ. ರಾವ್ ಶ್ಲಾಘಿಸಿ ಗೋಡಂಬಿ ಋತುವಿನಲ್ಲಿ ಮಲ್ಟಿಪಲ್ ಎಂಟ್ರಿ ವೀಸಾ ಪಡೆಯುವಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಲು ವಿನಂತಿಸಿದರು. ಉದ್ಯಮದ ಬೆನ್ನೆಲುಬಾಗಿರುವ ರೈತರನ್ನು ಬೆಂಬಲಿಸುವ ಅಗತ್ಯವನ್ನು ವಿವರಿಸಿದ ಅವರು ತಾಂಜಾನಿಯಾದಿಂದ ಹೆಚ್ಚಿನ ಉತ್ಪಾದನೆಯನ್ನು ಆಮದು ಮಾಡಿಕೊಳ್ಳಲು ಕೆಸಿಎಂಎ ಪೂರ್ಣ ಬೆಂಬಲ ನೀಡುವ ಭರವಸೆಯಿತ್ತರು. ಇದೇ ವೇಳೆ ದ.ಕ ಜಿಲ್ಲೆಯ ಮಂಗಳೂರಿಗೆ ಭೇಟಿ ನೀಡುವಂತೆ ಸಿಬಿಟಿ ಮಂಡಳಿಯನ್ನು ಆಹ್ವಾನಿಸಲಾಯಿತು. ಸಿಬಿಟಿ ಮುಖ್ಯಸ್ಥ ಅಲ್ಫ್ರೆಡ್ ಫ್ರಾನ್ಸಿಸ್ ಅವರು ಮಾತನಾಡಿ 2030ರ ವೇಳೆಗೆ ತಾಂಜಾನಿಯಾದ ಗೋಡಂಬಿ ಬೆಳೆಯನ್ನು ಒಂದು ಮಿಲಿಯನ್ ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಯೋಜನೆಗಳು, ಗೋಡಂಬಿ ಕೃಷಿಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಿರುವ ಕುರಿತು ವಿವರಿಸಿ ನವೆಂಬರ್ 2025 ರಲ್ಲಿ ದಾರ್ ಎಸ್ ಸಲಾಮ್‌ನಲ್ಲಿ ಆಯೋಜಿಸಲಾಗುವ ಆಫ್ರಿಕನ್ ಕ್ಯಾಶ್ ಅಲೈಯನ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.ಈ ಭೇಟಿಯ ಯಶಸ್ಸಿಗೆ ETG ತಂಡಕ್ಕೆ ಮತ್ತು ನರಹರಿ ಪ್ರಭು ಅವರಿಗೆ ಕೆಸಿಎಂಎ ಅಧ್ಯಕ್ಷ ಎ.ಕೆ. ರಾವ್ ಕೃತಜ್ಞತೆ ಸೂಚಿಸಿದ್ದಾರೆ.