ಮೂಡುಬಿದಿರೆ: ‘ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ NSS ಪೂರಕವಾದ ಕೆಲಸ ಮಾಡುತ್ತದೆ. ಭವಿಷ್ಯ ಭಾರತದ ಸಶಕ್ತ ನಾಗರಿಕರಾಗಿ ಎತ್ತರೆತ್ತರಕ್ಕೆ ಏರಲು ಹಾಗೂ ಸಮುದಾಯದ ಆಶಯಗಳನ್ನು ಪೂರೈಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಯ ಇಲ್ಲಿ ನಡೆದಿದೆ. ಶಿಬಿರದಲ್ಲಿ ನೀವು ಕಲಿತ ಶಿಸ್ತು, ಸಮಯ ಪ್ರಜ್ಞೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಸ್ಪಂದಿಸುವ ಮನಸ್ಸು ನೀವಾಗಬೇಕು. ಜೀವನದಲ್ಲಿ ಸ್ಪಷ್ಟ ಗುರಿ, ಆತ್ಮವಿಶ್ವಾಸ ಇದ್ದರೆ ಸೋಲನ್ನೂ ಕೂಡ ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಸಮೃದ್ಧ ಭಾರತದ ನಿರ್ಮಾಣದಲ್ಲಿ ನಿಮ್ಮಂತಹ ಯುವಜನರ ಪಾತ್ರ ಅಪಾರ’ ಎಂದು ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷ ಹಾಗೂ ಮಹಾವೀರ ಕಾಲೇಜಿನ ಪೂರ್ವ ವಿದ್ಯಾರ್ಥಿಯೂ ಆಗಿರುವ ಸುಚರಿತ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಪೇರಿ, ಹೊಸಂಗಡಿ ಇಲ್ಲಿ ನಡೆದ ಶ್ರೀ ಮಹಾವೀರ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ,’ವಿದ್ಯಾರ್ಥಿಗಳು ಎಷ್ಟೇ ಜ್ಞಾನವಂತರಾದರೂ ಪ್ರಜ್ಞಾವಂತರಾಗದೇ ಹೋದರೆ ಪ್ರಯೋಜನವಿಲ್ಲ. ಕೃಷಿ, ಹೈನುಗಾರಿಕೆ ಮುಂತಾದ ಚಟುವಟಿಕೆಗಳನ್ನು ಯಾವತ್ತೂ ನಾವು ಕೈಬಿಡಬಾರದು, ಇವೇ ನಮ್ಮ ಜೀವನದ ಅಂಗ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ, ‘ಒಬ್ಬನಾಗಿ ಮಾಡಲು ಸಾಧ್ಯವಿಲ್ಲದ್ದನ್ನು ಎಲ್ಲರೂ ಜೊತೆ ಸೇರಿ ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಎನ್‌ಎಸ್‌ಎಸ್ ಶಿಬಿರದಲ್ಲಿ ಅದು ಸಾಬೀತಾಗಿದೆ’ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ ಹೊಸಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಜಗದೀಶ್ ಹೆಗ್ಡೆ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಯೂ ಅಗಿರುವ ಹರಿಪ್ರಸಾದ್, ಮಹಾವೀರ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿರುವ ಅಬ್ದುಲ್ ರೆಹಮಾನ್, ಪತ್ರಕರ್ತರಾಗಿರುವ ಹರೀಶ್ ಆದೂರು, ಪೇರಿಯ ಶಾರದಾ ಭಜನಾ ಮಂಡಳಿಯ ಅಧ್ಯಕ್ಷರಾಗಿರುವ ಪದ್ಮರಾಜ ಪೇರಿ ಇವರೆಲ್ಲರೂ ವಿದ್ಯಾರ್ಥಿಗಳು ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದುದಕ್ಕೆ ಅಭಿನಂದಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಪ್ರೊ.ಹರೀಶ್, ಎನ್.ಎಸ್.ಎಸ್.ಘಟಕದ ಕಾರ್ಯದರ್ಶಿಗಳಾದ ಬಿ. ನಿತೇಶ್ ಮತ್ತು ದೀಪಶ್ರೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ಶಿಬಿರಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ ಸುಚರಿತ ಶೆಟ್ಟಿ ಹಾಗೂ ಹರಿಪ್ರಸಾದ್‌ರವರನ್ನು ಸನ್ಮಾನಿಸಲಾಯಿತು. ಶಿಬಿರದ ವಿದ್ಯಾರ್ಥಿಗಳು ಪೇರಿ ಅಂಗನವಾಡಿಗೆ ಕುಕ್ಕರ್ ಹಾಗೂ ಗಡಿಯಾರವನ್ನು ಕೊಡುಗೆಯಾಗಿ ನೀಡಿದರು. ಶಿಬಿರಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಬಿರಾರ್ಥಿ ರೋಹಿಸ್ಟನ್ ಪಿಂಟೋ ಸ್ವಾಗತಿಸಿ, ಎನ್.ಎಸ್.ಎಸ್. ಸಂಯೋಜನಾ ಅಧಿಕಾರಿ ಶಾರದಾ ವಂದಿಸಿದರು. ಎನ್.ಎಸ್.ಎಸ್.ಘಟಕದ ಕಾರ್ಯದರ್ಶಿ ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.