ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್‌ಗೆ ಬೀಳ್ಕೊಡುಗೆ: ವಿಶಾಲ ಮನೋಭಾವ ಮತ್ತು ಸಮಗ್ರ ವೈದ್ಯಕೀಯ ದೃಷ್ಟಿಕೋನ ಅಳವಡಿಸಿಕೊಳ್ಳಿ – ಡಾ. ಮೋಹನ್ ಆಳ್ವ
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್’’ ಕಾಲೇಜಿನ ವಿಎಸ್ ಆಚರ‍್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಆಯುರ್ವೇದವು ಇಂದು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಸುಮಾರು 17 ರಾಷ್ಟ್ರಗಳಿಗೆ ಇದರ ವಿಸ್ತರಣೆ ಆಗಿದ್ದು, 25ಕ್ಕೂ ಹೆಚ್ಚು ಯುರೋಪಿನ ರಾಷ್ಟ್ರಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆಯುತ್ತಿರುವುದು ಈ ವೈದ್ಯ ಪದ್ಧತಿಯ ಬೆಳವಣಿಗೆಯ ಸೂಚಕವಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ₹3,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯ ಮತ್ತು ಸಚಿವರ ವ್ಯವಸ್ಥೆಯೂ ಇರುವುದರಿಂದ ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಮಹತ್ವ ಸ್ಪಷ್ಟವಾಗುತ್ತದೆ ಎಂದರು.